ಬಾಲ್ಯಾವಸ್ಥೆಯಿಂದಲೇ ಸಾಹಿತ್ಯ ಬೋಧನೆಯಾಗಲಿ: ಚಿತ್ಕಳಾ ಬಿರಾದಾರ

ಬೀದರ:ಮಾ.17:ಭಾಷೆ ಮತ್ತು ಸಾಹಿತ್ಯವು ಸಂಸ್ಕøತಿಯ ಭಾಗವಾಗಿದ್ದು, ಅದನ್ನು ಕಡೆಗಣಿಸಿದಲ್ಲಿ ನಮ್ಮ ಸಂಸ್ಕøತಿ, ತಾಯಿ ನೆಲವನ್ನು ಬಿಟ್ಟಂತಾಗುತ್ತದೆ. ಹಾಗಾಗಿ ಸಾಹಿತ್ಯ ನಂಟನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಬಾಲ್ಯಾವಸ್ಥೆಯಿಂದಲೇ ಮನೆ ಮತ್ತು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಸಾಹಿತ್ಯವನ್ನು ಭೋದಿಸುವ ಕೆಲಸವಾಗಬೇಕು ಎಂದು ಕನ್ನಡತಿ ಧಾರವಾಹಿಯ ಅಮ್ಮಮ್ಮ ಖ್ಯಾತಿಯ ನಟಿ ಚಿತ್ಕಳಾ ಬಿರಾದಾರ ಅವರು ತಿಳಿಸಿದರು

ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮಾರ್ಚ್ 16ರಂದು ನಡೆದ ಸಾಹಿತ್ಯ-ಸಂಸ್ಕøತಿ ಸಂವರ್ಧನೆಯಲ್ಲಿ ತಾರಾಲೋಕ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಮತ್ತು ಚಿತ್ರೋದ್ಯಮಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡದ ಯಶಸ್ವಿ ಹಳೆಯ ಸಿನೆಮಾಗಳಾದ ಶರಪಂಜರ, ಬಂಗಾರದ ಮನುಷ್ಯ, ಎರಡು ಕನಸು, ನಾಗಮಂಡಲ, ವಂಶವೃಕ್ಷ, ಸಾಕ್ಷಾತ್ಕಾರ, ಗೆಜ್ಜೆಪೂಜೆಯಂತಹ ಸಾಕಷ್ಟು ಚಲನಚಿತ್ರಗಳು, ಇಂದಿನ ಕಾಂತಾರದಂತಹ ಚಲಚಿತ್ರಗಳು ಹಾಗೂ ಹಲವು ಧಾರವಾಹಿಗಳು ಜನಮೆಚ್ಚುಗೆ ಗಳಿಸುವುದಕ್ಕೆ ಅವುಗಳಲ್ಲಿರುವ ಉತ್ತಮ ಸಾಹಿತ್ಯವೇ ಕಾರಣ. ಸಾಹಿತ್ಯವನ್ನು ಕೈಹಿಡಿದ ಸಿನೆಮಾ ಮತ್ತು ದೃಶ್ಯಮಾಧ್ಯಗಳು ಯಾವಾಗಲೂ ಯಶಸ್ವಿಯಾಗಿವೆ ಎಂದು ಪ್ರತಿಪಾದಿಸಿದರು.

ತಾರಾಲೋಕದಲ್ಲಿರುವ ಅನೇಕರು ಮಾತನಾಡುವಾಗ ಅಕಾರ ಮತ್ತು ಹಕಾರ ಬಳಕೆಯಂತಹ ಸಾಕಷ್ಟು ಲೋಪಗಳನ್ನು ಕಾಣುತ್ತೇವೆ. ತಾರಾಲೋಕ ಸೇರಿದಂತೆ ನಾಡಿನ ಪ್ರತಿಯೊಬ್ಬರು ಭಾಷೆಯ ಕುರಿತಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಸಿನೆಮಾ ಕ್ಷೇತ್ರದಲ್ಲಿನ ಪ್ರತಿಯೊಬ್ಬರೂ ಭಾಷಾ ಬಳಕೆ ಸರಿಪಡಿಸಿಕೊಂಡಲ್ಲಿ ನಮ್ಮ ಭಾಷೆಯನ್ನು ಇನ್ನಷ್ಟು ಬೆಳೆಸಬಹುದು. ತಾರಾಲೋಕಕ್ಕೆ ಸಾಹಿತ್ಯವೇ ಆಧಾರಸ್ಥಂಬದಂತಿದ್ದು, ಅದನ್ನು ಕಡೆಗಣಿಸಬಾರದು ಎಂದು ಹೇಳಿದರು.

ಬೀದರ್‍ನ ನಟ ನಿರ್ದೇಶಕ ಮತ್ತು ನಿರ್ಮಾಪಕರಾದ ವಿಷ್ಣುಕಾಂತ ಬಿ.ಜೆ ಅವರು ಮಾತನಾಡಿ, ಸಾಹಿತ್ಯಕ್ಕೂ ಮತ್ತು ಚಲನಚಿತ್ರಕ್ಕೂ ಸಾಕಷ್ಟು ನಂಟಿರುತ್ತದೆ. ಕಥೆಯೇ ಅದರ ಜೀವಾಳವಾಗಿರುತ್ತದೆ. ಸಿನೆಮಾವೆಂದರೆ ಅಸಹ್ಯ ಎನ್ನುವ ಭಾವನೆ ಕೆಲವರಲ್ಲಿದೆ ಆದರೆ ಉತ್ತಮ ಸಿನೆಮಾಗಳನ್ನು ಸಾಕಷ್ಟು ನೋಡಬಹುದು. ಉತ್ತಮ ಮನಸ್ಸು ಮತ್ತು ಭಾವನೆಯೊಂದಿಗೆ ಕೆಲಸ ಮಾಡಿದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.

ಸಾಹಿತಿ, ನಟ, ನಿರ್ಮಾಪಕರಾದ ಮಹಿಪಾಲರೆಡ್ಡಿ ಮುನ್ನೂರ, ಖ್ಯಾತ ಚಲನಚಿತ್ರ ಹಾಸ್ಯ ನಟ ವೈಜಿನಾಥ ಬಿರಾದಾರ ಹಾಗೂ ಇತರರು ತಾರಾಲೋಕ ಮತ್ತು ಸಾಹಿತ್ಯಕ್ಕಿರುವ ನಂಟಿನ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕರಾದ ವೀರಸಮರ್ಥ, ನಿರ್ಮಾಪಕ ಸುರೇಶ ಪಾಟೀಲ ಸೋಲಪೂರ್, ಕಿರುತೆರೆ ನಟಿ ರಸಜ್ಞಾ ರೆಡ್ಡಿ ತೆಲುಗು, ನಟ-ನಿದೇರ್ಶಕ ವಿವೇಕ ಸಜ್ಜನ್, ನಟ ಸಿದ್ದಾರೂಢ ಕಂದಗೂಳ, ವೀರಣ್ಣಾ ಕಾರಭಾರಿ, ನಟ ನಿರ್ದೇಶಕ ಪಂಡಿತ್ ಮಾಳೆಗಾಂವ್, ಕಿರುಚಿತ್ರದ ನಟ ಗಜಸೂರ್ಯ, ನಟ ರವಿ ಶಿವಯೋಗಿ, ನಟಿ ಶಿವಾನಿ ಡೊಂಗರೆ, ನಟ-ನಿರ್ದೇಶಕ ಮಹೇಶ ಪಾಟೀಲ, ಉಮೇಶ ಸಲಗರ, ಸಂಗೀತ ನಿರ್ದೇಶಕ ಸರ್ವೇಶ್, ಸ್ನೇಹಿತ ಚಲನಚಿತ್ರದ ನಾಯಕಿ ಸುಲಕ್ಷಾ, ನಟ-ನಿರ್ಮಾಪಕ ನಾಗೇಶ ಪಾಟೀಲ, ಸಂಗೀತ ನಿರ್ದೇಶಕ ಗುರು, ನಟ ನಿರ್ಮಾಪಕ ಅವಿನಾಶ ಜನಕಟ್ಟೆ, ನಿರ್ದೇಶಕ ಗುರುಪ್ರಸಾದ ಚಂದ್ರಶೇಖರ, ವಿ.ಎಫ್.ಎಕ್ಸ್ ನಿರ್ದೇಶಕ ಸಂಗಮೇಶ ವಾಲೆ, ನಟ ರಮೇಶ ಪಾಟೀಲ, ಹಣ್ಮು ಪಾಜಿ, ಅಂಗೈಲಿ ಅಕ್ಷರ ಕಿರುಚಿತ್ರದ ನಟಿ ನೇಹಾ ಮೂಲಗೆ, ಸಮ್ಮೇಳನಾಧ್ಯಕ್ಷರಾದ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ ಸೇರಿದಂತೆ ಇತರರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ನಾಗರಾಜ ಜೋಗಿ ನಿರೂಪಿಸಿದರು. ಜಗನ್ನಾಥ ಶಿವಯೋಗಿ ವಂದಿಸಿದರು.