
ಬೀದರ, ಆ.11: ಬಾಲ್ಯವಿವಾಹ ನಿಷೇಧಿಸುವಲ್ಲಿ ತಳಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಿಕ್ಷಕರು, ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಬಾಲ್ಯವಿವಾಹ ತಡೆಗಟ್ಟಬಹುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ಹೇಳಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಿದ್ಯಾನಿಕೇತನ ಸಂಸ್ಥೆ, ಜೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ಹಾಗೂ ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆ ಇವರ ಸಹಭಾಗಿತ್ವದಲ್ಲಿ ಬಾಲ್ಯವಿವಾಹ ನಿಷೇಧಿಸುವಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ನಡೆದ ಕಾರ್ಯಗಾರ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ ವತಿಯಿಂದ ಪ್ರತಿ ಗ್ರಾಮಗಳಲ್ಲಿ ಗ್ರಾಮ ಸಭೆಯ ಮುಖಾಂತರ ಬಾಲ್ಯವಿಹಾದ ಕುರಿತು ಜಾಗೃತಿ ಮೂಡಿಸಬೇಕು. ಮಕ್ಕಳ ಕಳ್ಳ ಸಾಗಾಣಿಕೆಯಲ್ಲಿ ನಮ್ಮ ರಾಜ್ಯವು 3ನೇ ಸ್ಥಾನದಲ್ಲಿದೆ. ಇದನ್ನು ತಡೆಗಟ್ಟಲು ಎಲ್ಲಾ ಸಂಘ-ಸಂಸ್ಥೆಗಳು, ಅಧಿಕಾರಿಗಳು, ಪ್ರಮಾಣಿಕವಾಗಿ ಪ್ರಯತ್ನಿಸಿದರೆ ಮಾತ್ರ ತಡೆಗಟ್ಟಲು ಸಾಧ್ಯವಾಗುವುದು. ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯರು, ಹಾಗೂ ವಸತಿ ನಿಲಯದ ಮೇಲ್ವಿಚಾರಕರು ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೊಸಂಬೆ ಮಾತನಾಡಿ, ಬೀದರ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ದತಿ ನಿಷೇಧ ಮಾಡಬೇಕಾದರೆ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ. ಈ ಒಂದು ಸಮಾಜಿಕ ಪಿಡುಗೂ ಹೊಗಲಾಡಿಸಲು ಎಲ್ಲರೂ ಕೈಜೋಡಿಸಬೇಕು ಮತ್ತು ವಸತಿ ನಿಲಯಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವದರ ಜೊತೆಗೆ ಸ್ವಚ್ಛತೆಗು ಆದ್ಯತೆ ನೀಡಬೇಕೆಂದು ಹೇಳಿದರು.
ಬೀದರ ಪೊಲೀಸ್ ಉಪಾಧೀಕ್ಷಕ ಕೆ.ಎಂ ಸತೀಶ ಮಾತನಾಡಿ, ಬಾಲ್ಯವಿವಾಹಗಳನ್ನು ಪ್ರಾಥಮಿಕ ಹಂತದಲ್ಲಯೆ ತಡೆಯಬೇಕಾಗಿದೆ. ಸಾರ್ವಜನಿಕರು ಇಂತಹ ಯಾವುದೆ ದೂರುಗಳಿದ್ದರೆ ನಮ್ಮ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಬಹುದಾಗಿದೆ ಈ ಸೇವೆ ದಿನದ 24 ಗಂಟೆಗಳು ಒದಗಿಸಲಾಗುತ್ತಿದೆ ಮತ್ತು ಸಾರ್ವಜನಿಕರು ಕರೆ ಮಾಡಿದ ತಕ್ಷಣ 15 ನಿಮಷಗಳಲ್ಲಿಯೆ ನಮ್ಮ ಪೊಲೀಸರು ಸ್ಥಳಕ್ಕೆ ಬರುತ್ತಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆ ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರಿನ ವೆಂಕಟೇಶ್.ಬಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ರಾಘವೇಂದ್ರ ಎಚ್.ಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಭಾಕರ, ಮಕ್ಕಳ ಹಕ್ಕುಗಳ ಸಮಿತಿಯ ಅಧ್ಯಕ್ಷೆ ರಜೀಯಾ ಬಳಬಟ್ಟಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.