ಬಾಲ್ಯವಿವಾಹ ತಡೆಗೆ ಸಹಕಾರ ನೀಡಿ : ವಾಳ್ವೇಕರ

ಬಾಗಲಕೋಟೆ: ಮಾ24: ಜಿಲ್ಲೆಯಲ್ಲಿ ಬಾಲ್ಯವಿವಾಹ ಬಹಳ ಗಟ್ಟಿಯಾಗಿ ಬೇರು ಬಿಟ್ಟಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಲು ಎಲ್ಲ ಸಹಕಾರ ಅಗತ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ತಿಳಿಸಿದರು.
ನವನಗರದ ಕೋರ್ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಶಿಶು ಅಭಿವೃದ್ದಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡ ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳು ಮತ್ತು ಪೊಸ್ಕೋ ಕಾಯ್ದೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರಕಾರ ಬಲಿಷ್ಠವಾದ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಅವುಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾಧಿಕಾರಿಗಳು ಹಕ್ಕುಗಳ ರಕ್ಷಣೆಗೆ ಕಂಕಣಬದ್ದರಾಗಬೇಕಿದೆ. ಮಕ್ಕಳ ರಕ್ಷಣೆ ಒದಗಿಸುವ ಕೆಲಸವಾಗಬೇಕು. ಬಾಲ್ಯವಿವಾಹಕ್ಕೆ ಒಳಗಾಗುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಆಯಾ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಮಾತನಾಡಿ ಮಾನವನಿಗೆ ಇರುವ ಹಕ್ಕುಗಳನ್ನು ದುರುಪಯೋಗವಾದಾಗ ಮಾತ್ರ ಶೋಷಣೆಯ ಪ್ರಕರಣಗಳು ಕಂಡುಬರುತ್ತವೆ. ಮಕ್ಕಳ ಹಕ್ಕುಗಳ ರಕ್ಷಿಸುವುದು ಅಗತ್ಯವಾಗಿದೆ. ಬಾಲ್ಯವಿವಾಹ ತಡೆಯಲು ಸಹಕಾರ ದೊರೆಯುತ್ತಿದ್ದು, ಗ್ರಾಮ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಘವೇಂದ್ರ ಭಟ್ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳ ಮತ್ತು ಪೊಸ್ಕೋ ಕಾಯ್ದೆ ಕುರಿತು ವಿವರವಾಗಿ ತಿಳಿಸಿಕೊಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎ.ಕೆ.ಬಸಣ್ಣವರ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎನ್.ಪಾಟೀಲ, ತಾ.ಪಂ ಕಾರ್ಯನಿವಾಹಕ ಅಧಿಕಾರಿ ಎನ್.ವಾಯ್.ಬಸರಿಗಿಡದ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಸದಾಶಿವ ಬೆಳಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಹಿರೇಮಠ, ಸಿಡಿಪಿಓ ಶಿಲ್ಪಾ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.