ಬಾಲ್ಯದಿಂದಲೇ ಉತ್ತಮ ಗುಣಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು

ವಿಜಯಪುರ.ಮಾ೮: ಮಕ್ಕಳು ಬಾಲ್ಯದಿಂದಲೇ ಉತ್ತಮ ಮೌಲ್ಯ, ಆದಶ, ತತ್ವ ಗುಣಗಳನ್ನು ಬೆಳೆಸಿಕೊಂಡು ಅವುಗಳನ್ನು ಕರಗತ ಮಾಡಿಕೊಂಡರೆ ಜೀವನದಲ್ಲಿ ಎಲ್ಲಾ ಕೌಶಲ್ಯಗಳು ವೃದ್ಧಿಯಾಗುವುದರೊಂದಿಗೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಅಡಿಪಾಯವಾಗುತ್ತದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ ಮಂಜುನಾಥ್ ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೨೦೨೩-೨೪ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ “ಸುವರ್ಣ ಸಂಭ್ರಮ” ಶಾಲಾ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಇದೆ ಶಾಲೆಯಲ್ಲಿ ಓದಿದ ತಮ್ಮನ್ನು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉತ್ತಮ ಸ್ಥಾನಮಾನಗಳೊಂದಿಗೆ ಭವಿಷ್ಯ ರೂಪಿಸಿಕೊಂಡಿದ್ದು ೭೫ನೇ ವರ್ಷಕ್ಕೆ ಕಾಲಿಟ್ಟಿರುವ ಈ ಶಾಲೆಗೆ ಸುದೀರ್ಘವಾದ ಇತಿಹಾಸವಿದೆ ಎಂದು ತಿಳಿಸಿದರು.
ಪ್ರಸ್ತಾವಿಕ ನುಡಿ ನುಡಿದ ಉಪ ಪ್ರಾಂಶುಪಾಲರಾದ ಪಿ ವೆಂಕಟೇಶ್ ರವರು ಶಿಕ್ಷಣದಿಂದ ಎಲ್ಲವೂ ಸಾಧ್ಯವೆಂಬುದು ಕೆಲವೊಮ್ಮೆ ಅನ್ವರ್ತವೆನಿಸದಿರದು ಎಷ್ಟೋ ಸಲ ನಾವು ಪಡೆದ ಶಿಕ್ಷಣಕ್ಕೂ ಮಾಡುವ ಕೆಲಸಕ್ಕೂ ಸಂಬಂಧವಿರುವುದಿಲ್ಲ, ಮನಸ್ಸಿನಲ್ಲಿ ತುಮುಲಗಳಿದ್ದರೆ ಅದನ್ನು ಸ್ಥಿಮಿತದಲ್ಲಿರುವ ಶಾಂತಚಿತ್ತದಿಂದ ಆಲೋಚಿಸುವ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ತಿಳಿಸಿ, ಈಗಾಗಲೇ ಶಾಲೆಗೆ ದಾನಿಗಳ ಸಹಾಯದಿಂದ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ಶಾಲಾ ಆವರಣದಲ್ಲಿ ನೆಲಹಾಸುಗಳನ್ನು ಹಾಸಿದ್ದು, ಒಂದುವರೆ ಲಕ್ಷ ರೂ ವೆಚ್ಚದಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾ ಸಮ ವಸ್ತ್ರ ವಿತರಿಸಿದ್ದು, ನಮ್ಮ ಶಾಲೆಯು ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ಐದು ವರ್ಷಗಳಿಂದಲೂ ಶಾಲೆ ಶೇ ೯೦ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವುದರೊಂದಿಗೆ ಜಿಲ್ಲೆಯಲ್ಲಿಯೇ ಉತ್ತಮ ಶಾಲೆ ಎಂದು ಹೆಸರು ಪಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ವಿಮಲಾ ಬಸವರಾಜು,ಏವಿವಿ ಟ್ರಸ್ಟ್‌ನ ಕಾರ್ಯದರ್ಶಿ ತೇಜಸ್, ಪುರಸಭಾ ಸದಸ್ಯರಾದ ಹನಿ ಫುಲ್ಲಾ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಎನ್ ಮುನಿಚಿನಪ್ಪ, ಬೇಕರಿ ಆನಂದಪ್ಪ, ವಿ ಹರೀಶ್ ಕುಮಾರ್, ಎಂ ಅಶ್ವಥ್, ಎಂ ನಾರಾಯಣಸ್ವಾಮಿ, ಶಿವಮೂರ್ತಿ,ಪುರಸಭಾ ಸದಸ್ಯರಾದ ಸಿಎಂ ರಾಮು, ಎಸ್ ಆರ್ ಎಸ್ ಬಸವರಾಜು, ಶಿಕ್ಷಕರುಗಳಾದ ನಾರಾಯಣ್, ಕರಗಪ್ಪ, ಪೆದ್ದನ್ನ, ರೋಹಿಣಿ ಇನ್ನಿತರೆ ಶಿಕ್ಷಕರಿಂದ ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
೨೦೨೨-೨೩ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಏವಿವಿ ಟ್ರಸ್ಟ್ ಹಾಗೂ ಹಳೆಯ ವಿದ್ಯಾರ್ಥಿಗಳು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.