ಬಾಲ್ಯದಲ್ಲಿ ನಾಟಕದಿಂದ ಪ್ರಭಾವಿತರಾಗಿದ್ದ ಬಾಪು

ಧಾರವಾಡ, ಮಾ.28: ಬಾಲ್ಯದಲ್ಲೇ ನಾಟಕಗಳಿಂದ ಪ್ರಭಾವಿತಗೊಂಡಿದ್ದ ಗಾಂಧೀಜಿ, ರಂಗಭೂಮಿ ಸಾರ್ವಜನಿಕರನ್ನು ಆದರ್ಶ ಬದುಕಿನತ್ತ ಕೊಂಡೊಯ್ಯುತ್ತದೆ ಎಂದಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ವಿದ್ಯಾ ನಾಡಿಗೇರ ಹೇಳಿದರು.

ರಂಗಾಯಣದ ಸುವರ್ಣ ಸಾಂಸ್ಕøತಿಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ,ಕಸ್ತೂರಬಾ 150 ವಿಚಾರ ಸಂಕಿರಣ ಕಾರ್ಯಕ್ರಮದ ಪ್ರಥಮ ಗೋಷ್ಠಿ – ರಂಗಭೂಮಿ ; ಗಾಂಧಿ ಚಿಂತನೆಗಳು ವಿಷಯದ ಕುರಿತು ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ಬಾಲ್ಯದಲ್ಲಿ ‘ಸತ್ಯ ಹರಿಶ್ಚಂದ್ರ’, ‘ಶ್ರವಣನ ಪಿತೃ ಭಕ್ತಿ’ ನಾಟಕದಿಂದ ಪ್ರಭಾವಿತರಾಗಿ ತಮ್ಮ ಜೀವನದಲ್ಲಿ ಎಂದಿಗೂ ಸುಳ್ಳು ಹೇಳಲಿಲ್ಲ. ಆದ್ದರಿಂದಲೇ ಅವರನ್ನು ‘ಸತ್ಯದ ಧೃವತಾರೆ’ ಎಂದು ಕರೆಯಲಾಗಿದೆ.

ಕಸ್ತೂರ ಬಾ ಕೇವಲ ತನ್ನ ಮಕ್ಕಳಿಗೆ, ಜಗತ್ತಿಗೆ ಮಾತ್ರವಲ್ಲದೆ ತಮ್ಮ ಪತಿ ಮಹಾತ್ಮ ಗಾಂಧೀಜಿ ಅವರಿಗೂ ತಾಯಿ ಆಗಿದ್ದರು. ಅನಕ್ಷರಸ್ಥರಾಗಿದ್ದ ಕಸ್ತೂರ ಬಾ, ಯಾವುದೇ ವಿಷಯವನ್ನು ಪರಾಮರ್ಶಿಸದೇ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ ಎಂದರು.

ಸಾಹಿತ್ಯ, ಮಹಾತ್ಮರ ಜೀವನ ಚರಿತ್ರೆ ಓದುವುದರಿಂದ ಜೀವನವನ್ನು ಆದರ್ಶವಾಗಿ ರೂಪಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಮಹಾತ್ಮರ ಉದಾತ್ತ ವಿಚಾರಗಳನ್ನು, ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾದರೆ ತಿಂಗಳಿಗೆ ಕನಿಷ್ಠ ಒಂದಾದರೂ ಪುಸ್ತಕವನ್ನು ಕೊಂಡು ಓದುವಂತೆ ಸಲಹೆ ನೀಡಿದರು.

ರಂಗಕರ್ಮಿ ರಜನಿ ಗರುಡ ಮಾತನಾಡಿ, ಅವರು, ಗಾಂಧೀಜಿಯವರ ರಾಜಕೀಯ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳು ಇಡೀ ವಿಶ್ವವನ್ನೆ ಪ್ರಭಾವಿಸಿವೆ. ಅವರ ಅನೇಕ ರಾಜಕೀಯ ವಿಚಾರಗಳನ್ನು, ಚಳವಳಿಗಳನ್ನು ರಂಗಭೂಮಿ ಬಳಸಿಕೊಂಡು ಇಂದಿನ ಯುವಜನಾಂಗಕ್ಕೆ ನಾಟಕದ ಮುಖಾಂತರ ತೋರಿಸಲಾಗುತ್ತದೆ ಎಂದರು.

ಸ್ವಾತಂತ್ರ್ಯ ಹೋರಾಟದ ಜಾಗೃತಿ ಸ್ವದೇಶಿ ಚಳವಳಿಗಳನ್ನು ನಾಟಕದ ಮೂಲಕ ಪ್ರದರ್ಶಿಸಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲಾಗುತ್ತಿದೆ . ಗಾಂಧೀಜಿ ಮತ್ತು ಕಸ್ತೂರ ಬಾ ಜೀವನದ ಘಟನೆಗಳನ್ನು ಅನೇಕ ನಾಟಕದ ಮೂಲಕ ಪ್ರಸ್ತುತಪಡಿಸಲಾಗುತ್ತಿದೆ ಎಂದು ಹೇಳಿದರು.

 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ಗೋಷ್ಠಿಯ ಅಧ್ಯಕ್ಷತೆಯನ್ನು ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ವಹಿಸಿದ್ದರು.