ಬಾಲ್ಟಿಮೋರ್ ಸೇತುವೆಗೆ ಹಡಗು ಡಿಕ್ಕಿ: ಇಬ್ಬರ ಮೃತದೇಹ ಪತ್ತೆ

ಬಾಲ್ಟಿಮೋರ್ (ಅಮೆರಿಕಾ), ಮಾ.೨೮- ಬಾಲ್ಟಿಮೋರ್ ಸೇತುವೆಗೆ ಸರಕು ಸಾಗಾಟ ಹಡಗು ಡಿಕ್ಕಿ ಹೊಡೆದು ಹಾನಿಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಕಾರ್ಮಿಕರ ಮೃತದೇಹಗಳು ನೀರಿನಲ್ಲ ಪತ್ತೆಯಾಗಿದೆ.
ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಕಾಂಕ್ರೀಟ್ ಮತ್ತು ತಿರುಚಿದ ಉಕ್ಕಿನ ಅವಶೇಷಗಳೊಳಗೆ ಹೆಚ್ಚಿನ ವಾಹನಗಳು ಸಿಕ್ಕಿಬಿದ್ದಿರುವ ಬಗ್ಗೆ ಸೋನಾರ್ (ಸೆನ್ಸರ್ ಉಪಕರಣ) ತೋರಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮೇರಿಲ್ಯಾಂಡ್ ಪೊಲೀಸರು ಘೋಷಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ನಿರ್ಮಾಣ ಕಾರ್ಮಿಕರ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಪೈಕಿ ನಾಲ್ವರ ಶವಗಳು ಇನ್ನೂ ಪತ್ತೆಯಾಗಿಲ್ಲ. ಸದ್ಯ ಮುಳುಗುಗಾರರು ಅವಶೇಷಗಳನ್ನು ಭೇದಿಸಿ, ಮೃತದೇಹಗಳ ಶೋಧಕಾರ್ಯ ನಡೆಸುವುದು ಸುರಕ್ಷಿತವಲ್ಲ ಎಂದು ಪೊಲೀಸರು ಎಚ್ಚರಿಸಿದ್ದಾರೆ. ನೀರಿನಲ್ಲಿರುವ ಅವಶೇಷಗಳನ್ನು ತೆಗೆದುಹಾಕಿದ ಬಳಿಕ ಡೈವರ್‌ಗಳು (ಮುಳುಗುಗಾರರು) ಮೃತದೇಹಗಳ ಶೋಧಕಾರ್ಯ ನಡೆಸಬಹುದು ಎಂದು ತಿಳಿಸಿದ್ದಾರೆ. ಸೋನಾರ್ ಸ್ಕ್ಯಾನ್‌ಗಳ ಆಧಾರದ ಮೇಲೆ, ವಾಹನಗಳು ಸೂಪರ್‌ಸ್ಟ್ರಕ್ಚರ್‌ನಲ್ಲಿ ಸುತ್ತುವರಿದಿವೆ ಎಂದು ನಾವು ದೃಢವಾಗಿ ನಂಬುತ್ತೇವೆ. ಕಾಂಕ್ರೀಟ್ ಕೆಳಗೆ ಬೀಳುವುದನ್ನು ನಾವು ದುರಂತವಾಗಿ ನೋಡಿದ್ದೇವೆ ಎಂದು ಮೇರಿಲ್ಯಾಂಡ್‌ನ ರಾಜ್ಯ ಪೊಲೀಸ್ ಅಧೀಕ್ಷಕ ಕರ್ನಲ್ ರೋಲ್ಯಾಂಡ್ ಬಟ್ಲರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೆ ಫೆಡರಲ್ ತನಿಖಾಧಿಕಾರಿಗಳು ಹಡಗಿನ ಧ್ವನಿ ಡೇಟಾ ರೆಕಾರ್ಡರ್‌ನಿಂದ ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ ದುರಂತದ ವಿವರವಾದ ಟೈಮ್‌ಲೈನ್ ಅನ್ನು ಕೂಡ ನೀಡಿದ್ದಾರೆ.