ಬಾಲಿವುಡ್ ಫಿಲ್ಮ್ ಗಳಲ್ಲಿ ರಂಗು ಕಳೆದುಕೊಳ್ಳುತ್ತಿರುವ ಹೋಳಿ ಹಬ್ಬದ ಹಾಡುಗಳು

ಹೋಳಿಹಬ್ಬ ಬಣ್ಣದ ಹಬ್ಬ ಬಂತು ಎಂದರೆ ಬಾಲಿವುಡ್ ಜನರು ಕೂಡಾ ಸಂಭ್ರಮಿಸುತ್ತಾರೆ. ಬಾಲಿವುಡ್ ನಲ್ಲಿ ಹೋಳಿ ಹಬ್ಬದ ಹಾಡುಗಳು ಸಾಕಷ್ಟು ಫಿಲ್ಮ್ ಗಳಲ್ಲಿ ಬಂದಿವೆ. ಕೆಲವು ಫಿಲ್ನ್ ಗಳಲ್ಲಿ ಹೋಳಿಹಬ್ಬದ ಹಾಡುಗಳು ಇಷ್ಟೊಂದು ಜನಪ್ರಿಯವಾಗಿವೆ ಎಂದರೆ ಇಂದಿಗೂ ಹೋಳಿ ಹಬ್ಬ ಬಂತೆಂದರೆ ಅದೇ ಹಾಡುಗಳನ್ನು ಕೇಳಲು ಜನ ಇಷ್ಟಪಡುತ್ತಾರೆ .


ಆದರೆ ಇತ್ತೀಚಿನ ದಿನಗಳಲ್ಲಿ ಫಿಲ್ಮ್ ಗಳಲ್ಲಿ ಹೋಳಿಯ ಸಿಚುವೇಶನ್ ಕಂಡುಬಂದರೂ ಅಂದಿನ ಮಸ್ತಿ ತುಂಬಿದ ಹೋಳಿಹಾಡುಗಳು ಕಾಣೆಯಾಗಿವೆ.
ಫಿಲ್ಮ್ ಗಳ ಶೋಕಿ ಇರುವ ಯುವ ವರ್ಗದ ಆಸಕ್ತಿಯೂ ಇಂದು ಬದಲಾಗಿದೆ. ಹೋಳಿ ಹಾಡುಗಳಿಗೆ ಅಷ್ಟೊಂದು ಡಿಮಾಂಡ್ ಇಲ್ಲ.
ಇಂದಿನ ಅನೇಕ ಫಿಲ್ಮ್ ಗಳಲ್ಲಿ ಹೋಳಿ ಹಾಡುಗಳು ಇದ್ದರೂ ಅದರಲ್ಲಿ ಹಿಂದಿನಂತೆ ಕಥೆಯ ಟರ್ನಿಂಗ್ ಪಾಯಿಂಟ್ ಸಿಗುವುದಿಲ್ಲ. ಅಥವಾ ಕಥೆ ಮುಂದಕ್ಕೆ ಹೋಗುವಲ್ಲಿ ಈ ಹಾಡಿನ ದೃಶ್ಯವೂ ಸಹಾಯವಾಗುವುದಿಲ್ಲ. ಕೇವಲ ಮೋಜು ಮಸ್ತಿಗಾಗಿ ಮಾತ್ರ ಫಿಲ್ಮ್ ನಲ್ಲಿ ಒಂದು ಹಾಡು ತೋರಿಸುತ್ತಾರಷ್ಟೆ.


ಫಿಲ್ಮ್ ಕಾರ್ ರಾಜಕುಮಾರ್ ಸಂತೋಷಿ ಅವರು ತನ್ನ ಫಿಲ್ಮ್ ’ದಾಮಿನಿ’ಯಲ್ಲಿ ಹೋಳಿ ಹಾಡಿನ ದೃಶ್ಯದ ಉಪಯೋಗವನ್ನು ಫಿಲ್ಮಿನ ಟರ್ನಿಂಗ್ ಪಾಯಿಂಟ್ ಗಾಗಿ ತಂದಿದ್ದರು.
’ಆಖಿರ್ ಕ್ಯೋಂ’ ಫಿಲ್ಮ್ ನಲ್ಲಿ ಸಾತ್ ರಂಗ್ ಮೇ ಖೇಲ್ ರಹೀ.,ಫಿಲ್ಮ್ ’ಕಾಮ್ ಚೋರ್’ ನಲ್ಲಿ ಮಲ್ ದೇ ಗುಲಾಲ್ ಮೋಹೆ… ಹಾಡಿನಲ್ಲಿ ನಿರ್ದೇಶಕರು ಫಿಲ್ಮ್ ನ ಕಥೆಯನ್ನು ಮುಂದುವರಿಯಲು ಬಳಸಿದ್ದರು.
ಅನೇಕ ಫಿಲ್ಮ್ ಗಳಲ್ಲಿ ಹೋಳಿಯ ದೃಶ್ಯವನ್ನು ಮತ್ತು ಹಾಡನ್ನು ಫಿಲ್ಮ್ ನಲ್ಲಿ ಉತ್ಸಾಹವನ್ನು ಹೆಚ್ಚಿಸಲೂ ಬಳಸಿಕೊಂಡಿದ್ದರು. ಇಲ್ಲಿ ಮೊದಲ ಫಿಲ್ಮ್ ನ ಹೆಸರು ’ಮದರ್ ಇಂಡಿಯಾ’. ಇದರ ಹಾಡು ಹೋಳಿ ಆಯಿರೆ ಕನಾಯೀ…. ಇಂದಿಗೂ ಪ್ರಖ್ಯಾತಿ .ಅನಂತರ ’ನವರಂಗ್’ ನ ಜಾ ರೆ ಹಟ್ ನಟ್ ಕಟ್, ’ಫಾಗುನ್’ ಫಿಲ್ಮ್ ನ ಪಿಯಾ ಸಂಗ್ ಹೋಲಿ ಖೇಲೂ ರೆ…., ’ಲಮೆ’ ಫಿಲ್ಮಿನ ಮೋಹೆ ಛೋಡೋ ನ ನಂದ ಕೆ ಲಾಲ ಹಾಡು ಹೋಳಿಯ ಫಿಲ್ಮ್ ಗಳಲ್ಲಿ ಪ್ರಾತಿನಿಧ್ಯ ಪಡೆದವುಗಳು.


ದಿಲೀಪ್ ಕುಮಾರ್ ಅವರ ಮೊದಲ ಫಿಲ್ಮ್ ಜ್ವಾರ್- ಭಾಟಾ ದಲ್ಲಿ ಹೋಳಿಯ ದೃಶ್ಯ ಕಂಡುಬಂದಿತ್ತು .ಫಿಲ್ಮ್ ನ ನಿರ್ದೇಶಕ ಅಮಿಯಾ ಚಕ್ರವರ್ತಿ ೧೯೪೪ ರಲ್ಲಿ ಹೋಳಿದೃಶ್ಯಗಳ ಶೂಟಿಂಗ್ ನಡೆಸಿ ಇತಿಹಾಸ ರಚಿಸಿದ್ದಾರೆ. ಫಿಲ್ಮ್ ಗಳಲ್ಲಿ ಹೋಳಿಯ ರಂಗು ಕಾಣಿಸುವಲ್ಲಿ ಯಶ್ ಚೋಪ್ರಾ ಎಲ್ಲಾ ನಿರ್ದೇಶಕರನ್ನು ಹಿಂದಿಕ್ಕಿದ್ದಾರೆ. ಯಶ್ ಚೋಪ್ರಾರ ’ಸಿಲ್ ಸಿಲಾ’ ದಲ್ಲಿ ರಂಗ್ ಬರ್ ಸೆ ಭೀಗೆ ಚುನರ್ ವಾಲೀ… ಬಾಲಿವುಡ್ ನಲ್ಲಿ ಹೋಳಿಯ ಬಹಳ ಜನಪ್ರಿಯ ಹಾಡಾಗಿದೆ. ಅನಂತರ ’ಮಶಾಲ್’ ನಲ್ಲಿ ಹೋಳಿ ಹಾಡು ಬಂದಿತ್ತು .ಡರ್ ಫಿಲ್ಮ್ ನಲ್ಲಿಯೂ ಬಂದಿತ್ತು. ಮೊಹಬ್ಬತೇಂ (ನಿರ್ದೇಶಕ ಆದಿತ್ಯ ಚೋಪ್ರಾ) ಫಿಲ್ಮ್ ನಲ್ಲೂ ಸೋನಿ ಸೋನಿ ಅಂಖಿಯೋ ವಾಲೀ… ಹೋಳಿ ಹಾಡು ಜನಪ್ರಿಯವಾಗಿದೆ.
ಬಾಲಿವುಡ್ ನ ಫಿಲ್ಮ್ ಗಳಲ್ಲಿ ಹೋಳಿಯ ಜನಪ್ರಿಯತೆ ಹೆಚ್ಚಿಸಿದವರು ಬಾಲಿವುಡ್ ಶಹನ್ಶಾ ಅಮಿತಾಭ್ ಬಚ್ಚನ್ ಹೆಸರು ಎಲ್ಲರಿಗಿಂತ ಮುಂದಿದೆ. ರೇಖಾರ ಜೊತೆಗೆ ಸಿಲ್ ಸಿಲಾ ದಲ್ಲಿ ರಂಗ್ ಬರ್ಸಾನೆ… ಬಹು ಖ್ಯಾತಿ.
ಅಮಿತಾಭ್ ಬಚ್ಚನ್- ಹೇಮಾಮಾಲಿನಿ ಜೊತೆಗೆ ’ಬಾಗ್ ಬಾನ್’ ನಲ್ಲಿ ಹೋಳಿ ಖೇಲೆ ರಘುವೀರಾ…. ಮತ್ತೆ ಪರದೆಯಲ್ಲಿ ಹೋಳಿಯ ರಂಗು ಕಾಣಿಸಿದರು. ’ವಕ್ತ್’ ನಲ್ಲಿ ಅಕ್ಷಯ್ ಕುಮಾರ್ ಪ್ರಿಯಾಂಕ ಚೋಪ್ರಾ ಹೋಳಿ ಹಾಡು ಡು ಮೀ ಎ ಫೇವರ್…. ಪ್ರಸಿದ್ಧಿಯಾಗಿದೆ. ಬಾಲಿವುಡ್ ನ ಆಕರ್ಷಕ ಜೋಡಿ ಧರ್ಮೇಂದ್ರ ಮತ್ತು ಹೇಮಾಮಾಲಿನಿ ಹೋಳಿಯ ದೃಶ್ಯದ ಹಾಡಿನ ಮೂಲಕ ಫಿಲ್ಮ್ ಗಳಲ್ಲಿ ಇತಿಹಾಸ ರಚಿಸಿದ್ದಾರೆ. ’ಶೋಲೆ’ ಫಿಲ್ಮ್ ನ ಹಾಡು ’ಹೋಲಿ ಕೆ ದಿನ್ ದಿಲ್ ಖಿಲ್ ಜಾತೆ ಹೈ’ ಬಹಳ ಪ್ರಸಿದ್ದಿ ಪಡೆದಿದೆ.
ಈ ರೀತಿ ಮದರ್ ಇಂಡಿಯಾದಿಂದ ಶುರುವಾದ ಹೋಳಿ ಗೀತೆಗಳು ’ಪದ್ಮಾವತಿ’ ,’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ತನಕ ಹೋಳಿ ಹಾಡುಗಳನ್ನು ಕಾಣಬಹುದು.
ಇಂದು ಹೋಳಿ ಹಾಡುಗಳು ಸಿನಿಮಾದ ಬದಲು ಟಿವಿ ಧಾರಾವಾಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ .ಮ್ಯೂಸಿಕ್ ಕಂಪೋಸರ್ ಅನ್ನು ಮಲ್ಲಿಕ್ ಹೇಳುವಂತೆ “ಜಮಾನ ಬದಲಾಗಿದೆ. ಜನ ಬದಲಾಗಿದ್ದಾರೆ. ವಿಚಾರ ಬದಲಾಗಿದೆ .ಅಂದಿನಂತೆ ನಿರ್ದೇಶಕರೂ ಇಲ್ಲ, ಅಂದಿನಂತೆ ಬರೆಯುವ ಸ್ಕ್ರಿಪ್ಟ್ ರೈಟರ್ ಗಳು ಕೂಡ ಇಲ್ಲ” ಎನ್ನುತ್ತಾರೆ.
ಒಂದೊಮ್ಮೆ ರಾಜ್ ಕಪೂರ್ ರ ಆರ್ ಕೆ ಸ್ಟುಡಿಯೋ ದ ಹೋಳಿ ಸಂಭ್ರಮ ಅಂದರೆ ಇಡೀ ಬಾಲಿವುಡ್ ಸಂಭ್ರಮಿಸುತ್ತಿತ್ತು. ಇಂದು ರಾಜ್ ಕಪೂರ್ ಇಲ್ಲ, ಅವರ ಆರ್ ಕೆ ಸ್ಟುಡಿಯೋ ಕೂಡಾ ಮಾರಲಾಗಿದೆ.

ಬಣ್ಣದ ಹಬ್ಬದ ಆಟದಲ್ಲಿ ಪಾಲ್ಗೊಳ್ಳಲು ನಿರಾಕರಿಸುವ ಬಾಲಿವುಡ್ ಸ್ಟಾರ್ ಗಳು

ಬಾಲಿವುಡ್ ಫಿಲ್ಮ್ ಗಳಲ್ಲಿ ಹೋಳಿ ಹಬ್ಬದ ಬಣ್ಣ ಎರಚುವ ಹಾಡುಗಳಲ್ಲಿ ಭರ್ಜರಿ ಬಣ್ಣ ಹಾಕಿಕೊಂಡು ಕುಣಿಯುವ ಹಲವು ತಾರೆಯರಲ್ಲಿ ಕೆಲವರಿಗೆ ನಿಜಜೀವನದಲ್ಲಿ ಮಾತ್ರ ಹೋಳಿ ಹಬ್ಬದ ರಂಗಿನಾಟ ಇಷ್ಟ ಇಲ್ಲವಂತೆ.
ಅನೇಕ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ಬಣ್ಣ ಎರಚಿಕೊಂಡು ನೆಂಟರನ್ನು ಮಿತ್ರರನ್ನು ಕರೆದು ಹೋಳಿ ಆಚರಿಸುತ್ತಾರೆ. ಇನ್ನು ಕೆಲವು ನಟ-ನಟಿಯರು ಇದರಿಂದ ದೂರವೇ ಇರಲು ಇಷ್ಟಪಡುತ್ತಾರೆ.


ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರ ಅಜ್ಜ ರಾಜಕಪೂರ್ ಆರ್ ಕೆ ಸ್ಟುಡಿಯೋ ದಲ್ಲಿ ದೊಡ್ಡಪ್ರಮಾಣದಲ್ಲಿ ರಂಗ್ ಪಂಚಮಿಯ ದಿನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು.ಅಲ್ಲಿ ಹೋಳಿ ಪಾರ್ಟಿ ನಡೆಸುತ್ತಿದ್ದರು.ಒಂದು ರೀತಿಯಲ್ಲಿ ಹೋಳಿಹಬ್ಬದ ಪಾರ್ಟಿಯ ಟ್ರೆಂಡ್ ಕೂಡ ರಾಜಕಪೂರ್ ಅವರೇ ಬಾಲಿವುಡ್ ನಲ್ಲಿ ಆರಂಭಿಸಿದವರು ಎನ್ನಬಹುದು.ಆದರೆ ಅವರ ನಿಧನದ ನಂತರ ಕಪೂರ್ ಫ್ಯಾಮಿಲಿ ಕೆಲವು ಕಾಲ ಅದನ್ನು ಮುಂದುವರಿಸಿದರೂ ನಂತರ ಪಾರ್ಟಿ ಆಯೋಜನೆ ನಿಲ್ಲಿಸಿತು.


ಕರೀನಾ ಕಪೂರ್ ಹೇಳುತ್ತಾರೆ – “ರಾಜ್ ಕಪೂರ್ ನಿಧನದ ನಂತರ ಅವರ ಜೊತೆಗೆನೇ ಆರ್.ಕೆ.ಸ್ಟುಡಿಯೋದ ಹೋಳಿಹಬ್ಬದ ಸಂಭ್ರಮವೂ ಹೊರಟುಹೋಗಿದೆ. ಹೀಗಾಗಿ ನಾನು ಹೋಳಿ ಆಡುವುದನ್ನೇ ಬಿಟ್ಟಿದ್ದೇನೆ” ಎಂದು.
’ಪದ್ಮಾವತ್’ ಮತ್ತು ’ಗೋಲಿಯೋಂ ಕಿ ರಾಸಲೀಲಾ- ರಾಮಲೀಲಾ’ ದಲ್ಲಿ ಹೋಳಿ ಆಡಿರುವ ನಟ ರಣವೀರ್ ಸಿಂಗ್ ಅಸಲಿ ಬದುಕಿನಲ್ಲಿ ಹೋಲಿ ಆಡುವುದಿಲ್ಲವಂತೆ. ಒಂದು ಸಂದರ್ಶನದಲ್ಲಿ ರಣವೀರ್ ಸಿಂಗ್ ಹೇಳುತ್ತಾರೆ -“ಬಣ್ಣ ಎರಚಿದ ನಂತರ ಅದರ ಸ್ವಚ್ಛತೆಯನ್ನು ಮಾಡುವುದು ಮಹಾ ರಗಳೆಯ ಕೆಲಸ” ಎಂದು.


ನಟಿ ಕೃತಿ ಸೇನನ್ ಹೋಳಿ ಹಬ್ಬದ ಬಣ್ಣದಿಂದ ಬಹಳ ದೂರ ಇರುತ್ತಾರೆ. ತನ್ನ ಹೋಮ್ ಟೌನ್ ದೆಹಲಿಯಲ್ಲಿ ಹೋಳಿ ಆಟದಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು.ಆದರೆ ಮುಂಬೈಗೆ ಬಂದ ನಂತರ ಹಬ್ಬದಿಂದ ದೂರವಿದ್ದಾರೆ. ಯಾಕೆಂದರೆ ಇದರಿಂದ ಚರ್ಮಕ್ಕೆ ತೊಂದರೆ ಉಂಟಾಗಿದೆಯಂತೆ.
ಪಾಪುಲರ್ ಫಿಲ್ಮ್ ಮೇಕರ್ ಕರಣ್ ಜೋಹರ್ ಅವರು ಅಭಿಷೇಕ್ ಬಚ್ಚನ್ ರ ಕಾರಣ ಹೋಲಿ ಆಡುವುದಿಲ್ಲವಂತೆ!
ಒಂದು ಶೋದಲ್ಲಿ ಕರಣ್ ಜೋಹರ್ ಹೀಗೆ ಪ್ರತಿಕ್ರಿಯಿಸಿದ್ದಾರೆ- ಬಾಲ್ಯದಲ್ಲಿ ಅಮಿತಾಭ್ ಬಚ್ಚನ್ ಮನೆಯಲ್ಲಿ ಹೋಳಿ ಪಾರ್ಟಿಗೆ ತೆರಳುತ್ತಿದ್ದರಂತೆ. ಅವರಿಗೆ ಬಣ್ಣಗಳನ್ನು ಹಚ್ಚಿಕೊಳ್ಳುವುದು ಇಷ್ಟ ಇಲ್ಲ. ಅಮಿತಾಭ್ ಬಚ್ಚನ್ ರ ಮನೆಗೆ ಹೋದ ತಕ್ಷಣ ಅಭಿಷೇಕ್ ಬಚ್ಚನ್ ಬಣ್ಣ ತುಂಬಿದ ನೀರಿನ ಟಾಂಕಿಗೆ ಕರಣ್ ರನ್ನು ದೂಡಿದರಂತೆ. ಅಂದಿನಿಂದ ಅವರಿಗೆ ಹೋಳಿಯಲ್ಲಿ ಬಣ್ಣ ಅಂದರೆ ಹೆದರಿಕೆ .ತನ್ನ ಹತ್ತು ವರ್ಷ ಪ್ರಾಯದಿಂದ ಹಿಡಿದು ಇಂದಿನ ತನಕವೂ ಬಣ್ಣದಿಂದ ದೂರವಿದ್ದಾರಂತೆ.


ಬಾಲಿವುಡ್ ನಟಿ ತಾಪಸಿ ಪನ್ನೂ ಕೂಡ ಹೋಲಿ ಹಾಡುವುದಿಲ್ಲ. ತಾಪಸಿಯ ತಂದೆ-ತಾಯಿ ಕೂಡ ಹೋಲಿ ಆಡುತ್ತಿರಲಿಲ್ಲವಂತೆ.
ನಟ ಜಾನ್ ಅಬ್ರಾಹಂ ಕೂಡ ತಾನು ಹೋಳಿ ಹಬ್ಬವನ್ನು ಆಚರಿಸುವುದಿಲ್ಲ ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದರು. “ಜನರು ಈ ಸಂದರ್ಭವನ್ನು ಮಿಸ್ಯೂಸ್ ಮಾಡುತ್ತಾರೆ. ಹೀಗಾಗಿ ನಾನು ಹೋಳಿ ಆಚರಣೆಗೆ ಹೋಗುವುದಿಲ್ಲ.”


ಇದನ್ನು ಪ್ರಕೃತಿಯ ನಷ್ಟವೆಂದೂ ಹೇಳುವ ಜಾನ್ ಅಬ್ರಾಹಮ್, ಕಾಮದಹನ ಎಂದು ಮರವನ್ನು ಕಡಿಯುತ್ತೇವೆ. ಹೋಳಿ ಹುಣ್ಣಿಮೆಗೆ ಅದಕ್ಕೆ ಬೆಂಕಿ ಕೊಡುತ್ತೀರಿ. ಧರ್ಮದ ಹೆಸರಿನಲ್ಲಿ ಪ್ರಕೃತಿಯನ್ನು ನಾಶ ಮಾಡುತ್ತೀರಿ. ಹೀಗಾಗಿ ನಾನು ಹೋಳಿ ಆಚರಿಸುವುದಕ್ಕೆ ಹೋಗಲಾರೆ ಅನ್ನುತ್ತಾರೆ.