ಬಾಲಿವುಡ್ ನಿರ್ದೇಶಕ ಪ್ರದೀಪ್ ಸರ್ಕಾರ್ ವಿಧಿವಶ

ಮುಂಬೈ, ಮಾ. ೨೪- ಬಾಲಿವುಡ್‌ನ ಖ್ಯಾತ ನಿರ್ದೇಶಕ ಪ್ರದೀಪ್‌ಸರ್ಕಾರ್ ಇಂದು ಬೆಳಿಗ್ಗೆ ವಿಧಿವಶರಾಗಿದ್ದು, ಅವರಿಗೆ ೬೮ ವರ್ಷ ವಯಸ್ಸಾಗಿತ್ತು.
ಪರಿಣಿತ, ಲಗಾ ಚುನರಿ ಮೇ ದಾಗ್, ಮರ್ದಾನಿ, ಜನಪ್ರಿಯ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.
ಜಾಹೀರಾತು ಚಿತ್ರ ನಿರ್ದೇಶಕರಾಗಿ ಸುದೀರ್ಘ ೧೭ ವರ್ಷ ದುಡಿದು ಬಳಿಕ ಪ್ರದೀಪ್ ಸರ್ಕಾರ್ ಬಾಲಿವುಡ್‌ಗೆ ಬಂದಿದ್ದರು. ಹಲವು ನೆನಪಿನಲ್ಲಿ ಉಳಿಯುವಂಥ ಜಾಹೀರಾತುಗಳನ್ನು ಅವರು ನಿರ್ದೇಶಿಸಿದ್ದರು. ಪರಿಣಿತ ಅವರು ನಿರ್ದೇಶಿಸಿದ ಮೊದಲ ಚಿತ್ರ. ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿಯ ಮನ್ನಣೆಗೆ ಪಾತ್ರವಾಗಿತ್ತು.
ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ಪ್ರದೀಪ್ ಸರ್ಕಾರ್. ದಾದಾ. ಆರ್‌ಐಪಿ ಎಂದು ಅವರು ಬರೆದಿದ್ದಾರೆ.
ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಪ್ರದೀಪ್ ಸರ್ಕಾರ್ ಹಲವಾರು ಜನಪ್ರಿಯ ಸಂಗೀತ ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ನಿರ್ದೇಶಿಸಿದರು. ಅವರು ೨೦೦೫ ರಲ್ಲಿ ಮೊದಲ ಬಾರಿ ಪರಿಣೀತಾ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ವಿದ್ಯಾ ಬಾಲನ್, ಸೈಫ್ ಅಲಿ ಖಾನ್ ಹಾಗೂ ಸಂಜಯ್ ದತ್ ಕಾಣಿಸಿಕೊಂಡಿದ್ದರು.
ಹಲವು ವರ್ಷಗಳಲ್ಲಿ, ಪ್ರದೀಪ್ ಸರ್ಕಾರ್ ಅವರು ಲಗಾ ಚುನಾರಿ ಮೇ ದಾಗ್, ಲಫಾಂಗೆ ಪರಿಂದೇ, ಮರ್ದಾನಿ ಮುಂತಾದ ಚಿತ್ರಗಳನ್ನು ಮಾಡಿದ್ದಾರೆ. ನಿರ್ದೇಶಕರಾಗಿ ಅವರ ಕೊನೆಯ ಪ್ರಾಜೆಕ್ಟ್ ೨೦೧೮ ರ ಚಲನಚಿತ್ರ ಹೆಲಿಕಾಪ್ಟರ್ ಈಲಾ. ಇದರಲ್ಲಿ ಕಾಜೋಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಪ್ರದೀಪ್ ಸರ್ಕಾರ್ ನಿಧನಕ್ಕೆ ಬಾಲಿವುಡ್ ನಟ ಅಜಯ್ ದೇವಗನ್, ನಟ ಮನೋಜ್ ಬಾಜ್‌ಪೇಯಿ ಸೇರಿದಂತೆ ಬಾಲಿವುಡ್ ಸೆಲಿಬ್ರಿಟಿ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.