ಬಾಲಾಪರಾಧಿ ಕೇಂದ್ರ ನಿರ್ಮಾಣಕ್ಕೆ ವಿರೋಧ

ರಾಮನಗರ,ಸೆ.೩-ನಗರ ಸಮೀಪದ ಬಿಳಗುಂಬ ರಸ್ತೆಯಲ್ಲಿನ ಸಂಜೀವಿನಿ ಗಾರ್ಡನ್ ಬಳಿ ಉದ್ದೇಶಿತ ಬಾಲಕಿಯರ ಬಾಲಾಪರಾಧಿ ಕೇಂದ್ರದ ನಿರ್ಮಾಣ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸಂಜೀವಿನಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ವಿನಾಯಕ ನಗರ ಆಂಜನೇಯ ಆರ್ಚ್ ಬಳಿಯಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ಹೊರಟ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ ಪ್ರತಿಭಟಿಸಿ ಮನವಿ ಸಲ್ಲಿಸಿದರು. ಸಂಜೀವಿನಿ ಗಾರ್ಡನ್, ನಿಸರ್ಗ ಬಡಾವಣೆ, ನಾರಾಯಣಪ್ಪ ಬಡಾವಣೆ ಮತ್ತು ಚಾಮುಂಡಿಪುರದಲ್ಲಿ ಒಟ್ಟು ೬೦೦ಕ್ಕೂ ಹೆಚ್ಚು ನಿವೇಶನ, ೪೦೦ಕ್ಕೂ ಹೆಚ್ಚು ಕುಟುಂಬಗಳಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ಜನ ವಾಸವಾಗಿದ್ದಾರೆ. ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಹಿತದೃಷ್ಟಿಯಿಂದ ಬಿಳಗುಂಬ ರಸ್ತೆಯ ಸಂಜೀವಿನಿ ಗಾರ್ಡನ್ ಬಡಾವಣಿ ಹಿಂಭಾಗದ ಸಿಎ ನಿವೇಶನದಲ್ಲಿ ಬಾಲಕಿಯರ ಬಾಲಾಪರಾಧಿ ಕೇಂದ್ರ ನಿರ್ಮಾಣ ಮಾಡುವುದನ್ನು ಜಿಲ್ಲಾಡಳಿತ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ಸಂಜೀವಿನಿ ಗಾರ್ಡನ್ ನಿವಾಸಿಗಳಾದ ನಟರಾಜ್, ಸತೀಶ್, ಗಿರಿಯಪ್ಪ, ಶ್ರೀನಿವಾಸ್, ಯೋಗರಾಜ್, ಲೋಕೇಶ್, ಶಿವರಾಜು, ಜಯರಾಮು, ರಾಜಣ್ಣ, ಬಸವರಾಜು, ಗಂಗಮ್ಮ, ಸ್ವಾಮಿ, ಮೋಹನ್‌ಕುಮಾರ್, ಪ್ರೇಮ, ಶಿವರುದ್ರಯ್ಯ, ತಿಮ್ಮಪ್ಪ, ಚಲುವರಾಜು ಮುಂತಾದವರಿದ್ದರು