
ಮುದ್ದೇಬಿಹಾಳ:ಮಾ.29: ತಾಲೂಕಿನ ಯರಗಲ್ ಮದರಿ ಗ್ರಾಮದ ಮಧ್ಯ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಯ ಹೊಸ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿರೋಬ್ಬರಿಗೆ ಸೇರಿದ 2.50 ಕೋಟಿ ರೂ ಮೌಲ್ಯದ ಅಜಂತಾ ಕ್ವಾಟ್ರ್ಜ ಕಂಪನಿಯ ಗೋಡೆ ಗಡಿಯಾರಗಳು, ಟೀ ಶರ್ಟ್‍ಗಳು, ಕ್ಯಾರಿ ಬ್ಯಾಗ್ ಮುಂತಾದ ಸಾಮಗ್ರಿಗಳನ್ನು ಚುನಾವಣಾಧಿಕಾರಿಗಳ ಉಸ್ತುವಾರಿಯಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಪ್ತು ಮಾಡಿದ್ದಾರೆ.
ಈ ಹಿನ್ನೆಲೆ ವಿಧಾನಸಭಾ ಚುನಾವಣೆಯ ಮುದ್ದೇಬಿಹಾಳ ಮತಕ್ಷೇತ್ರದ 18ನೇ ಸೆಕ್ಟರ್ ಅಧಿಕಾರಿಯಾಗಿರುವ ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ ನೀಡಿದ ದೂರಿನ ಮೇರೆಗೆ ಕಾರ್ಖಾನೆಯ ಅಧ್ಯಕ್ಷ ಹಣಮಂತಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲ, ಉಪಾಧ್ಯಕ್ಷ ರಾಹುಲ್‍ಗೌಡ ಪಾಟೀ, ನಿರ್ದೇಶಕರಾದ ಎಚ್.ಎಲ್.ಪಾಟೀಲ, ಡಾ| ಅಜೀತ್ ಕನಕರಡ್ಡಿ, ಬಾಡಗಂಡಿಯ ಕಾಂಗ್ರೆಸ್ ಧುರೀಣ ಎಸ್.ಆರ್.ಪಾಟೀಲ ಅವರ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾನೆಯವರೆಗೂ ನಡೆದ ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು, ಕಂದಾಯ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿದೆ. ವಿಷಯದ ಗಂಭೀರತೆ ಅರಿತ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ್, ಜಿಲ್ಲಾ ಎಸ್ಪಿ ಎಚ್.ಡಿ.ಆನಂದಕುಮಾರ ತಡರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ದಾಳಿಯಲ್ಲಿ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪವಾರ, ತಹಶೀಲ್ದಾರ್ ರೇಖಾ ಟಿ., ಸೆಕ್ಟರ್ ಅಧಿಕಾರಿಯಾಗಿರುವ ಕೃಷಿ ಎಡಿ ಸುರೇಶ ಭಾವಿಕಟ್ಟಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬಸವನ ಬಾಗೇವಾಡಿ ಡಿಎಸ್ಪಿ ಕರುಣಾಕರಶೆಟ್ಟಿ, ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರೆ, ಮುದ್ದೇಬಿಹಾಳ ಠಾಣೆಯ ಪಿಎಸೈ ಆರೀಫ ಮುಷಾಪುರಿ, ಸೇರಿದಂತೆ ಮುದ್ದೇಬಿಹಾಳ, ತಾಳಿಕೋಟೆ, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮನಗೂಳಿ ಠಾಣೆಗಳ 60ಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದರು.
ಮತದಾರರಿಗೆ ಆಮೀಷ ಒಡ್ಡುವ ಉದ್ದೇಶಕ್ಕಾಗಿ ಇವುಗಳನ್ನು ಸಂಗ್ರಹಿಸಿ ಇಡಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಹಾಗೂ ಮತದಾರರಿಗೆ ಆಮೀಷ ಒಡ್ಡುವ ಉದ್ದೇಶದಿಂದ ಸಂಗ್ರಹಿಸಿ ಇಡಲಾಗಿದ್ದ ಗೋಡೆ ಗಡಿಯಾರದಲ್ಲಿ ಪೋಟೋ ಟೀಶರ್ಟ್‍ಗಳ ಮೇಲೆ ಎಸ್‍ಆರ್‍ಪಿ ಎಂದು ಮುದ್ರಿಸಲಾಗಿತ್ತು ಎಂದು ದೂರಿನಲ್ಲಿ ಬಾವಿಕಟ್ಟಿ ಅವರು ತಿಳಿಸಿದ್ದಾರೆ.
ಪಿಎಸೈ ಆರೀಫ್ ಮುಷಾಪುರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ. ಇದೇ ವೇಳೆ ಕಾರ್ಖಾನೆಯಲ್ಲಿರುವ ಗೋದಾಮುಗಳಲ್ಲಿ ಇನ್ನೂ ಸೀರೆ, ಕುಕ್ಕರ್ ಮತ್ತಿತರ ಸಾಮಗ್ರಿಗಳು ಇವೆ ಎನ್ನುವ ದೂರಿನ ಮೇಲೆ ಇನ್ನುಳಿದ ಗೋದಾಮುಗಳನ್ನೂ ಹುಡುಕಾಡಿದರೂ ಯಾವುದೇ ಸಂಶಯಾಸ್ಪದ ವಸ್ತು ಸಿಗದಿರುವುದು ಹಲವು ಸಂಶಯಗಳಿಗೆ ಕಾರಣವಾಯಿತು. ದಾಳಿಯಲ್ಲಿ ವಶಪಡಿಸಿಕೊಂಡಿರುವ ಸಾಮಗ್ರಿಗಳಿಗೆ ರಸೀದಿಗಳು ಇವೆ ಎನ್ನಲಾಗುತ್ತಿದೆ. ಈ ದಾಳಿ ಈ ಭಾಗದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.