ಬಾಲವಿಕಾಸ ಅಕಾಡೆಮಿ ಮಾದರಿ ಸಂಸ್ಥೆ – ಸಚಿವೆ ಜೊಲ್ಲೆ

ಧಾರವಾಡ, ನ.20- ಮಕ್ಕಳಿಗೆ ಅಗತ್ಯವಿರುವ ಸಂಸ್ಕಾರ, ಶಿಕ್ಷಣ, ಕೌಶಲ್ಯ ಕಲೆಗಳನ್ನು ಬೆಳೆಸಲು ರಾಜ್ಯ ಬಾಲವಿಕಾಸ ಅಕಾಡೆಮಿಯಿಂದ ವಿನೂತನವಾದ ಸೃಜನಾತ್ಮಕ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯಕ್ಕೆ ಮಾದರಿ ಎನಿಸುವಂತ ಸಂಸ್ಥೆಯನ್ನಾಗಿ ಬಾಲವಿಕಾಸ ಅಕಾಡೆಮಿ ರೂಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

 ಅವರು ಕರ್ನಾಟಕ ಬಾಲವಿಕಾಸ ಅಕಾಡೆಮಿ ಆವರಣದಲ್ಲಿ ಅಂತರ್‍ರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ ಅಂಗವಾಗಿ ಅಕಾಡೆಮಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಬಣ್ಣಗಳಲ್ಲಿ ಮಕ್ಕಳ ವಿಕಾಸ ಚಿತ್ರಕಲಾ ಕಾರ್ಯಾಗಾರ ಹಾಗೂ ಅಕಾಡೆಮಿ ವೆಬ್‍ಸೈಟ್, ಫೇಸ್‍ಬುಕ್ ಖಾತೆಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಕ್ಕಳಲ್ಲಿ ಮನೋಸ್ಥೈರ್ಯ ತುಂಬಲು, ಸ್ಪರ್ಧಾತ್ಮಕತೆ ಬೆಳೆಸಲು ಮತ್ತು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಇಲಾಖೆಯಿಂದ ಬಾಲಮಂದಿರ, ಬಾಲವಿಕಾಸ ಅಕಾಡೆಮಿ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ದಿವ್ಯಾಂಗರಿಗೆ ಇಲಾಖೆ ಮಾತೃಸ್ವರೂಪಿಣಿಯಾಗಿ ಅವರ ಬೇಕುಗಳನ್ನು ಪೂರೈಸುತ್ತಿದೆ ಎಂದು ಅವರು ತಿಳಿಸಿದರು.
ಬಾಲವಿಕಾಸ ಅಕಾಡೆಮಿಗೆ ಅಗತ್ಯ ಸಿಬ್ಬಂದಿ, ಅನುದಾನ ಹಾಗೂ ತಜ್ಞರ ನೆರವು ನೀಡಲು ಇಲಾಖೆಯಿಂದ ಕ್ರಮಕೈಗೊಳ್ಳಲಾಗುವುದು. ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಸಂಸ್ಥೆಯನ್ನಾಗಿ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಅಕಾಡೆಮಿ ವೆಬ್‍ಸೈಟ್‍ಗೆ ಹಾಗೂ ಕವಿವಿ ಕುಲಪತಿ ಪ್ರೊ.ಕೆ.ಬಿ. ಗುಡಸಿ ಅವರು ಅಕಾಡೆಮಿ ಫೇಸ್‍ಬುಕ್ ಖಾತೆಗೆ ಚಾಲನೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಸಚಿವರು ಚಿತ್ರ ಬಿಡಿಸುವ ಮೂಲಕ ಬಣ್ಣಗಳಲ್ಲಿ ಮಕ್ಕಳ ವಿಕಾಸ ಚಿತ್ರಕಲಾ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ನಂತರ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿದರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವೇದಿಕೆಯಲ್ಲಿದ್ದರು. ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಎಚ್. ಲಲಿತಾ, ಕಚೇರಿ ಅಧೀಕ್ಷಕ ಸಿ.ಎ. ಮುತ್ತಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ಬಣ್ಣಗಳಲ್ಲಿ ಮಕ್ಕಳ ವಿಕಾಸ ಚಿತ್ರಕಲಾ ಕಾರ್ಯಾಗಾರದಲ್ಲಿ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ 50 ಕ್ಕೂ ಹೆಚ್ಚು ಜನ ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದರು.