ಬಾಲಗಂಗಾಧರನಾಥ ಸ್ವಾಮೀಜಿಯವರ ೯ನೇ ಪುಣ್ಯಾರಾಧನೆ ಸಮಾರಂಭ

ತಿಪಟೂರು, ಜ. ೧೫- ಸಾಮಾಜಿಕ ಕೆಳಸ್ತರದ ವರ್ಗದಿಂದ ಉನ್ನತ ವರ್ಗದವರಿಗೂ ಸರ್ವ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಸೇವೆಗಳ ಮೂಲಕ ಸಾಮರಸ್ಯ ಮೂಡಿಸಿದ ಬಾಲಗಂಗಾಧರನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ೯ನೇ ಪುಣ್ಯಾರಾಧನಾ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಲಗಂಗಾಧರನಾಥ ಸ್ವಾಮೀಜಿಯವರ ಸಾಮಾಜಿಕ ಕಾಳಕಳಿ ಕಾರಣದಿಂದಲೇ ಜಗತ್ತಿನಾದ್ಯಂತ ಚಿರಸ್ಮರಣಿಯಾಗಿದ್ದರು. ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲಾ ವರ್ಗದ ಜನಸಾಮಾನ್ಯರಿಗೆ ದಾರಿ ದೀಪವಾಗಿ ಪ್ರಜ್ವಲಿಸುತ್ತಿದ್ದಾರೆ. ಸ್ವಾಮೀಜಿಯವರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಕ್ಕೆ ಸಾಕ್ಷಿಯಾಗಿ “ಕರ್ನಾಟಕ ವನಸಂವರ್ಧನ ಟ್ರಸ್ಟ್” ಪ್ರಾರಂಭಿಸಿ ರಾಜ್ಯಾದ್ಯಂತ ಕೋಟ್ಯಂತರ ಸಸಿ ನಡೆಸುವ ಕಾರ್ಯಕ್ರಮವನ್ನು ಜಾರಿಗೆ ತಂದು ಯಶಸ್ವಿಯಾಗಿ ಇತರರಿಗೆ ಪ್ರೇರಣೆಯಾದರು. ಅದ್ದರಿಂದ ಪ್ರತಿಯೊಬ್ಬರು ಸ್ವಾಮೀಜಿಯವರ ಚಿಂತನೆ, ಆದರ್ಶಗಳನ್ನು ಅರಿತು ನಡೆಯಬೇಕು ಎಂದರು.
ಶ್ರೀರಂಗ ಆಸ್ಪತ್ರೆಯ ವೈದ್ಯ ಡಾ.ವಿವೇಚನ್ ಮಾತನಾಡಿ, ಶಿಕ್ಷಣ, ಧಾರ್ಮಿಕ ಚಿಂತನೆ, ಸಾಮಾಜಿಕ ಸೇವಾ ಮನೋಭಾವದಿಂದ ವಿಶ್ವದಲ್ಲಿಯೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದು ಸ್ವಾಮೀಜಿಯವರ ಕಾರ್ಯಕ್ಕೆ ಸಾಟಿ ಮತ್ತೊಂದಿಲ್ಲ. ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದಂತಹ ವಿಶಿಷ್ಟ ಯೋಜನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎನ್ನುವಂತಹ ಮನೋಭಾವ ಮೂಡುವ ಸಲುವಾಗಿ ಎಲ್ಲರನ್ನು ಗೌರವವಿಸುತ್ತಿದ್ದರು. ಪ್ರಕೃತಿಯ ವಿನಾಶದಿಂದ ಮಾನವ ಅಂತ್ಯ ಎಂಬ ಸಂದೇಶವನ್ನು ಅರಿತಿದ್ದ ಅವರು ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತಹ ಕಾರ್ಯದಲ್ಲಿ ತೊಡಗಿದ್ದರು. ಸೇವಾ ಮನೋಭಾವಕ್ಕೆ ಉದಾಹರಣೆಯಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮುಖಾಂತರ ಉಚಿತ ಸೇವೆ, ಜ್ಞಾನ ಪ್ರಸರಣವನ್ನು ಇಂದಿಗೂ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಗುಡಿಗೌಡರು ಹುಚ್ಚೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್, ರುಕ್ಷ್ಮೀಣಿ ಪಾಟೀಲ್, ಶ್ರೀನಿವಾಸ್, ಕೃಷ್ಣಸ್ವಾಮಿ, ಮಾಜಿ ಗ್ರಾ.ಪಂ.ಸದಸ್ಯ ಮೋಹನ್‌ಕುಮಾರ್, ನಂಜುಂಡೇಗೌಡ, ರಂಗಪ್ಪ, ಕಾಂತರಾಜು, ಡಿ.ಕೆ.ಸೋಮಶೇಖರ್, ಕೃಷ್ಣೇಗೌಡ.ಡಿ.ಟಿ., ಜಯಕುಮಾರ್.ಡಿ.ಟಿ. ಸೇರಿದಂತೆ ಮಠದ ಸಿಬ್ಬಂದಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.