ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ,ಜು.18:ಜಿಲ್ಲೆಯ ಆಳಂದ್ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ವಿದ್ಯಾರ್ಥಿನಿ ಸರ್ಕಾರಿ ಶಾಲೆಯ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಶಾಲೆ ಮುಗಿಸಿಕೊಂಡು ಚಿಕ್ಕಮ್ಮನ ಮನೆಗೆ ತೆರಳುವುದಾಗಿ ಹೇಳಿ ಹೋದ ಬಾಲಕಿ ಮನೆಗೆ ಮರಳಿ ಬರಲಿಲ್ಲ. ಭಾನುವಾರ ತಡರಾತ್ರಿ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಪಾಲಕರಿಗೆ ಮತ್ತು ಮಹಿಳೆಯರಿಗೆ ಆಘಾತ ಉಂಟು ಮಾಡುವುದರ ಜೊತೆಗೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡಲೇ ಪ್ರಕರಣವನ್ನು ತನಿಖೆ ಕೈಗೊಂಡು ಫೋಕ್ಸೋ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಬಾಲಕಿಯ ಕುಟುಂಬಕ್ಕೆ ಭೇಟಿ ಮಾಡಿ ಮುಂದಿನ ಕ್ರಮದ ಕುರಿತು ವಿವರಿಸಿ ನ್ಯಾಯಾಂಗ ತನಿಖೆಗೆ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾ. ಪದ್ಮಾವತಿ ಎನ್. ಮಾಲಿಪಾಟೀಲ್, ಕಾ. ಭೀಮಾಶಂಕರ್ ಮಾಡಿಯಾಳ್, ಕಾ. ಎಚ್.ಎಸ್. ಪತಕಿ, ಶಿವಲಿಂಗಮ್ಮ ವಿ. ಲೆಂಗಟಿಕರ್, ವಿಜಯಲಕ್ಷ್ಮೀ ಯಳಸಂಗಿ, ಶರಣಮ್ಮ ಪೂಜಾರಿ, ಚನ್ನಮ್ಮ ಸೀತನೂರ್ ಮುಂತಾದವರು ಪಾಲ್ಗೊಂಡಿದ್ದರು.