
ತಿರುಪತಿ( ಆಂಧ್ರಪ್ರದೇಶ),ಆ.೧೪- ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಆರು ವರ್ಷದ ಮಗುವನ್ನು ಬಲಿ ಪಡೆದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮಗು ಬಲಿಪಡೆದ ಚಿರತೆಯು ನಿನ್ನೆ ಮಧ್ಯರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಎಸ್‌ವಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಟಿಟಿಡಿ ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ (ಆ.೧೧) ಅಲಿಪಿರಿ – ತಿರುಮಲ ಮೆಟ್ಟಿಲುದಾರಿಯಲ್ಲಿ ಕುಟುಂಬಸ್ಥರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಆರು ವರ್ಷದ ಮಗುವನ್ನು ಚಿರತೆ ಎಳೆದೊಯ್ದು ಬಾಲಕಿಯ ದೇಹದ ಅರ್ಧ ಭಾಗವನ್ನು ತಿಂದು ಹಾಕಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ನರಸಿಂಹಸ್ವಾಮಿ ದೇವಸ್ಥಾನದ ಅಕ್ಕಪಕ್ಕದ ಪ್ರದೇಶಲ್ಲಿ ಬೋನು ಇಟ್ಟಿತ್ತು.ಚಿರತೆ ಬೋನಿಗೆ ಸಿಕ್ಕಿ ಹಾಕಿಕೊಳ್ಳುವ ಭರದಲ್ಲಿ ಸ್ವಲ್ಪ ಗಾಯಗೊಂಡಿದೆ. ಎಸ್‌ವಿ ಮೃಗಾಲಯಕ್ಕೆ ಸ್ಥಳಾಂತರಿಸಿದ ಬಳಿಕ ಚಿಕಿತ್ಸೆ ನೀಡಲಾಗುವುದು. ಹಾಗೆಯೇ, ಸೆರೆ ಸಿಕ್ಕ ಚಿರತೆಯು ನರಭಕ್ಷಕವೋ, ಅಲ್ಲವೋ ಎಂಬ ಬಗ್ಗೆ ಸಹ ಪರೀಕ್ಷೆ ನಡೆಸಲಾಗುವುದು. ಎಲ್ಲ ಪರೀಕ್ಷೆಗಳ ಬಳಿಕ ಎಲ್ಲಿ ಬಿಡಬೇಕು ಎಂದು ಪರಿಶೀಲಿಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಚಿರತೆ ದಾಳಿಗೆ ಮಗು ಬಲಿಯಾದ ಹಿನ್ನೆಲೆಯಲ್ಲಿ ಟಿಟಿಡಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸಂಜೆ ಕತ್ತಲಾದ ನಂತರ ಅಲಿಪಿರಿ ಮತ್ತು ತಿರುಮಲದ ಪಾದಚಾರಿ ಮಾರ್ಗಗಳಲ್ಲಿ ಭಕ್ತರಿಗೆ ಅವಕಾಶ ನೀಡಬೇಕೋ, ಬೇಡವೋ ಎಂಬ ಕುರಿತು ಚರ್ಚೆ ನಡೆಸಿದ್ದಾರೆ. ಜೊತೆಗೆ, ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮಧ್ಯಾಹ್ನ ೨ ಗಂಟೆಯ ನಂತರ ಮೆಟ್ಟಿಲುಗಳ ಮೇಲೆ ಬರಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಏಳನೇ ಮೈಲಿಯಲ್ಲಿ ಮಕ್ಕಳ ಕೈಗೆ ಟ್ಯಾಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿ, ಮಕ್ಕಳ ಪೋಷಕರ ವಿವರಗಳು, ನಗರ, ಫೋನ್ ಸಂಖ್ಯೆ, ಭದ್ರತಾ ಸಿಬ್ಬಂದಿಯ ಟೋಲ್-ಫ್ರೀ ಸಂಖ್ಯೆ ಮತ್ತು ಇತರ ವಿವರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.