
ಕಲಬುರಗಿ.ಮಾ.17: ಜಿಲ್ಲೆಯ ಆಳಂದ್ ತಾಲ್ಲೂಕಿನ ಹಿತ್ತಲಶಿರೂರಿನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದು, ಆ ಕುರಿತು ನಿಂಬರ್ಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಸಹ ಇನ್ನೂ ಪೋಲಿಸರು ಪತ್ತೆ ಹಚ್ಚಿಲ್ಲ. ಆದ್ದರಿಂದ ಪೋಲಿಸ್ ವೈಫಲ್ಯವನ್ನು ಖಂಡಿಸಿ ಮಾರ್ಚ್ 22ರಂದು ಬೆಳಿಗ್ಗೆ 11 ಗಂಟೆಗೆ ನಿಂಬರ್ಗಾ ಗ್ರಾಮದಲ್ಲಿನ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14 ವರ್ಷದ ಬಾಲಕಿ ತಂದೆ ತೀರಿಹೋಗಿದ್ದು, ತಾಯಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಳೆ. ಹಿತ್ತಲಶಿರೂರಿನ ಅಜ್ಜಿಯ ಮನೆಯಲ್ಲಿಯೇ ಇದ್ದು ವ್ಯಾಸಂಗ ಮಾಡುತ್ತಿದ್ದು, ಕಳೆದ ಫೆಬ್ರವರಿ 24ರಂದು ಮಧ್ಯಾಹ್ನ 1-30ಕ್ಕೆ ಶಾಲೆಗೆ ಹೋದವಳು ಮನೆಗೆ ಮರಳಿ ಬಂದಿಲ್ಲ. ಈ ಕುರಿತು ನಿಂಬರ್ಗಾ ಪೋಲಿಸ್ ಠಾಣೆಗೆ ಬಾಲಕಿಯ ತಾಯಿ ಶ್ರೀಮತಿ ಶರಣಮ್ಮ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾದರೂ ಸಹ ಬಾಲಕಿಯನ್ನು ಪತ್ತೆ ಹಚ್ಚುತ್ತಿಲ್ಲ ಎಂದರು.
ಶ್ರೀಮಂತರ ಮಕ್ಕಳು ಕಾಣೆಯಾದರೆ ಒಂದರೆಡು ತಾಸುಗಳಲ್ಲಿ ತನಿಖೆ ಆರಂಭಿಸುತ್ತಾರೆ. ರಾಜಕೀಯ ನಾಯಕರ ಮೊಬೈಲ್ ಕಳೆದರೆ ಅದೊಂದು ದೊಡ್ಡ ಸುದ್ದಿಯಾಗುತ್ತದೆ. ಆದಾಘ್ಯೂ, ಬಡ ಕೂಲಿ ಕಾರ್ಮಿಕರ ಪುತ್ರಿ ಅಪಹರಣಕ್ಕೆ ಒಳಗಾದರೂ ಸಹ ದೂರು ವಿಳಂಬವಾಗಿ ದಾಖಲಿಸಲಾಗುತ್ತದೆ ಹಾಗೂ ಇಲ್ಲಿಯವರೆಗೂ ಪತ್ತೆ ಹಚ್ಚಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ನಿಂಬರ್ಗಾ ಠಾಣೆಯ ಪೋಲಿಸರ ವೈಫಲ್ಯ ಎದ್ದು ಕಾಣುತ್ತಿದೆ. ಅದರಲ್ಲಿಯೂ ಬಿಜೆಪಿ ಸರ್ಕಾರದಲ್ಲಿ ಭೂಗಳ್ಳರು, ಮರಳುಗಳ್ಳರು ಸೇರಿದಂತೆ ಆರೋಪಿಗಳ ಹಿತರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ಬಡವರನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶಿವಲಿಂಗ್ ಬಿ. ಮಾಡ್ಯಾಳಕರ್, ವಸಂತ್ ಎಂ. ಕುಮಸಿ, ಚಂದ್ರಕಾಂತ್ ಎಸ್. ಹೊಸಮನಿ, ಸಚಿನ್ ಟಿ. ಕಮನಕರ್, ಪ್ರಶಾಂತ್ ಎ. ಸನಗುಂದಿ, ಶ್ರೀಕಾಂತ್ ಸ್ವಾಮಿ, ಶ್ರೀಮತಿ ಸಂಗಮ್ಮ ಎಂ. ಬುಕ್ಕನ್, ಶ್ರೀಮತಿ ಚಂದ್ರಭಾಗಮ್ಮ ಎಸ್. ಮಂಗನಕರ್ ಮುಂತಾದವರು ಉಪಸ್ಥಿತರಿದ್ದರು.