ಬಾಲಕಿ ಅತ್ಯಾಚಾರ ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯ

ಕಲಬುರಗಿ,ಜು.17: ರಾಯಚೂರು ಜಿಲ್ಲೆಯ ಇಡಪನೂರ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿನ ಗಿಲ್ಲೆಸುಗೂರು ಕ್ಯಾಂಪಸ್‍ನಲ್ಲಿ ಅಲೆಮಾರಿ ಸಮುದಾಯದ ಬುಡಗಜಂಗಮ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ ಅವರು ಒತ್ತಾಯಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, 14 ವರ್ಷದ ಬಾಲಕಿಯನ್ನು ಅನುಮಾನಾಸ್ಪದವಾಗಿ ಅತ್ಯಾಚಾರ ಎಸಗಿ ಹತ್ಯೆ ಮಾಡಿ, ಆಕೆಯನ್ನು ಬೇವಿನ ಮರಕ್ಕೆ ನೇಣು ಹಾಕಿದ್ದಾರೆ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪೋಲಿಸರು ವಿಚಾರಣೆ ಮಾಡುತ್ತಿದ್ದಾರೆ. ಬಾಲಕಿಯ ಅಂತ್ಯಸಂಸ್ಕಾರ ಮಾಡಲಾಗಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರವು 25 ಲಕ್ಷ ರೂ.ಗಳ ಪರಿಹಾರವನ್ನು ಕೊಡಬೇಕು ಎಂದು ಆಗ್ರಹಿಸಿದರು.
ಮೂವರು ಆರೋಪಿಗಳ ಗುರುತು ಹಾಗೂ ವಿಳಾಸವನ್ನು ಸಹ ಪೋಲಿಸರು ಪಡೆದಿದ್ದಾರೆ. ಪೋಸ್ಟ್ ಮಾರ್ಟ್‍ಮ್ ವರದಿ ಇನ್ನೂ ಬಂದಿಲ್ಲ. ಪೋಲಿಸರು ಪ್ರಕರಣ ದಾಖಲಿಸಿಕೊಳ್ಳದೇ ವಿಚಾರಣೆ ಮಾಡುತ್ತಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ನ್ಯಾಯಾಲಯ, ಕಚೇರಿ, ಪೋಲಿಸ್ ಮುಂತಾದವುಗಳು ಯಾವುದೂ ಗೊತ್ತಿಲ್ಲದ ತಬ್ಬಲಿ ಸಮುದಾಯಗಳಲ್ಲಿ ಇಂತಹ ಕೃತ್ಯ ನಡೆಯುತ್ತಿರುವುದು ಅಸಹ್ಯ. ಇಂತಹ ಘಟನೆಗಳು ಮರುಕಳಿಸಬಾರದು. ಅದಕ್ಕಾಗಿ ಸರಿಯಾದ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಬ್ರಹ್ಮಾನಂದ್ ಮಿಂಚಾ, ಮುಖಂಡರಾದ ವಿಕಾಸ್ ಸಾವರಕರ್, ಅನಿಲ್ ಚಕ್ರ, ಗಣೇಶ್ ಕಾಂಬಳೆ, ಸಿದ್ರಾಮ್ ತೀರ್ಮಾನ್, ಯಮನಪ್ಪಾ ಪ್ರಸಾದ್, ಸಾಯಪ್ಪ ಮುಂತಾದವರು ಉಪಸ್ಥಿತರಿದ್ದರು.