ಬಾಲಕಿ ಅತ್ಯಾಚಾರಿಗೆ 20 ವರ್ಷ ಕಠಿಣಶಿಕ್ಷೆ

ಕಲಬುರಗಿ,ಏ.4: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ್ದರಿಂದ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 26 ಸಾವಿರ ರೂ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ( ವಿಶೇಷ ಪೋಕ್ಸೋ) ನ್ಯಾಯಾಲಯ ತೀರ್ಪು ನೀಡಿದೆ. ನಜೀರ್ ಪಟೇಲ ಇಮಾಮ್ ಪಟೇಲ್ ಟಾಕಳಿ ಶಿಕ್ಷೆಗೀಡಾದ ವ್ಯಕ್ತಿ.
2022 ರ ಮಾರ್ಚ ತಿಂಗಳಲ್ಲಿ ಈ ವ್ಯಕ್ತಿ ಬಾಲಕಿಗೆ ಚಾಕಲೇಟ್, ಹಣದ ಆಮಿಷ ತೋರಿಸಿ ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದ.
ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇನೆ ಎಂದು ಹೆದರಿಸಿದ್ದ.ಈ ಕುರಿತು ಕಲಬುರಗಿ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ( ವಿಶೇಷ ಪೋಕ್ಸೋ) ನ್ಯಾಯಾಲಯ -ಎಫ್‍ಟಿಎಸ್‍ಸಿ 1 ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ ಅವರು ಉಭಯಪಕ್ಷಗಳ ವಾದ ಆಲಿಸಿ ತೀರ್ಪು ಪ್ರಕಟಿಸಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.