ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ ೧೦ ವರ್ಷ ಕಠಿಣ ಶಿಕ್ಷೆ

ಮಂಗಳೂರು, ಮಾ.೧೯- ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಗೆ ೧೦ ವರ್ಷ ಕಠಿಣ ಶಿಕ್ಷೆ ಹಾಗೂ ೫೦ ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೋ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.
ಕೆಮ್ರಾಲ್ ಮುಲ್ಯೊಟ್ಟು ನಿವಾಸಿ ದಿನೇಶ್ ಶೆಟ್ಟಿ (೪೧) ಶಿಕ್ಷೆಗೊಳಗಾದ ಆರೋಪಿ. ಆರೋಪಿ ದಿನೇಶ್ ತನ್ನ ಪರಿಚಯದ ಬಾಲಕಿಯನ್ನು ಮದುವೆಯಾಗಿ ನಂಬಿಸಿ ೨೦೧೮ರ ಡಿಸೆಂಬರ್ ೨೩ರ ರಾತ್ರಿ ಮತ್ತು ೨೦೧೯ರ ಜನವರಿ ೬ರಂದು ಮಧ್ಯಾಹ್ನ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಇದಾದ ಎರಡು ತಿಂಗಳ ನಂತರ ಯುವತಿ ಅನಾರೋಗ್ಯಕ್ಕೆ ಈಡಾಗಿದ್ದಾಳೆ. ಪೋಷಕರ ಜತೆ ವೈದ್ಯರ ಬಳಿ ತೆರಳಿ ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಪೋಷಕರು ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ ದಿನೇಶ್ ಶೆಟ್ಟಿ ಅತ್ಯಾಚಾರಗೈದಿರುವ ವಿಷಯ ಬಯಲಿಗೆ ಬಂದಿತ್ತು. ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗುತ್ತದೆ. ಮಗುವಿನ ಡಿಎನ್‌ಎ ಪರೀಕ್ಷೆಯಲ್ಲೂ ಆರೋಪ ದೃಢಪಟ್ಟಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ ಪ್ರಕರಣವನ್ನು ಸಮಗ್ರ ವಿಚಾರಣೆ ನಡೆಸಿದ ನಂತರ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ೧೫ಮಂದಿ ಸಾಕ್ಷಿ ಹೇಳಿದ್ದು, ೧೨ ದಾಖಲೆಗಳನ್ನು ಪರಿಗಣಿಸಲಾಗಿದೆ. ಆರೋಪಿಗೆ ಐಪಿಸಿ ೩೭೬ ಪ್ರಕರಣದಡಿ ೭ ವರ್ಷ ಕಠಿಣ ಸಜೆ, ೫ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ೧ ತಿಂಗಳ ಕಠಿಣ ಸಜೆ, ಪೋಕ್ಸೋ ಪ್ರಕರಣದಡಿ ೧೦ ವರ್ಷ ಕಠಿಣ ಸಜೆ ಮತ್ತು ೫೦ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ ೨ ತಿಂಗಳು ಕಠಿಣ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಯ ಬಂಧನದ ನಂತರ ೨ವರ್ಷ ನ್ಯಾಯಾಂಗ ಬಂಧನದಲ್ಲಿದ್ದು, ಈ ಅವಧಿ ಶಿಕ್ಷೆಯಲ್ಲಿ ಕಡಿತಗೊಳಲಿದೆ. ಆರೋಪಿ ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸಬಹುದಾಗಿದೆ. ದಂಡದ ಮೊತ್ತದಲ್ಲಿ ೪೫ ಸಾವಿರ ರೂ.ನ್ನು ನೊಂದ ಬಾಲಕಿಗೆ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರದಿಂದಲೂ ಬಾಲಕಿ ಪರಿಹಾರ ಪಡೆಯಲು ಅರ್ಹರು ಎಂದು ಆದೇಶಿಸಲಾಗಿದೆ. ಶಿಕ್ಷೆಗೊಳಗಾದ ಆರೋಪಿ ಕೂಲಿ ಕೆಲಸ ಮಾಡಿ ಜೀವನ ಸಾಗುತ್ತಿದ್ದ. ಈತನಿಗೆ ಮದುವೆಯಾಗಿ, ಇಬ್ಬರು ಮಕ್ಕಳು ಕೂಡ ಇದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಮೂಲ್ಕಿ ಇನ್‌ಸ್ಪೆಕ್ಟರ್ ಆಗಿದ್ದ ಪಿ.ಎಂ. ಸಿದ್ದರಾಜು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣಸ್ವಾಮಿ ವಾದಿಸಿದ್ದರು.