ಬಾಲಕಿಯ ಅತ್ಯಾಚಾರ: ಆರೋಪಿ ಸೆರೆ

ಮೂಡಬಿದ್ರೆ, ನ.೨೧- ಬಾಲಕಿಯ ಅತ್ಯಾಚಾರವೆಸಗಿದ ಆರೋಪದಲ್ಲಿ ಕಲ್ಲಮುಂಡ್ಕೂರಿನ ರಿಕ್ಷಾ ಚಾಲಕನನ್ನು ಮಂಗಳೂರಿನ ಮಹಿಳಾ ಪೊಲೀಸರು ಬಂಧಿಸಿ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಯನ್ನು ಸತೀಶ್ ಅಂಚನ್ ಎಂದು ಗುರುತಿಸಲಾಗಿದೆ. ತನ್ನ ಊರಿನ ಬಾಲಕಿಯೊಬ್ಬಳ ಸ್ನೇಹವಾಗಿ ಆಕೆಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಜುಲೈನಲ್ಲಿ ಈಕೆ ಕಲ್ಲಮುಂಡ್ಕೂರಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಆರೋಪಿ ಸತೀಶ್ ಆಕೆಯನ್ನು ತನ್ನ ರಿಕ್ಷಾದಲ್ಲಿ ಬಲವಂತವಾಗಿ ಕುಳ್ಳಿರಿಸಿ ಕಲ್ಲು ಕೋರೆಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ‘ನಿನ್ನ ನಗ್ನ ಫೋಟೊ ನನ್ನಲ್ಲಿವೆ’ ಎಂದು ಯುವತಿಯನ್ನು ಬ್ಲಾಕ್‌ಮೇಲ್ ಮಾಡಿದ್ದ ಅಲ್ಲದೆ ವಿಷಯ ಬಾಯಿ ಬಿಟ್ಟರೆ ನಿನ್ನನ್ನು ಮತ್ತು ಮನೆಯವರನ್ನು ಕೊಲ್ಲುವುದಾಗಿ ಬೆದರಿಸಿದ್ದ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಯುವತಿ ಮನೆಯವರು ನೀಡಿದ ದೂರಿನಂತೆ ಮಂಗಳೂರಿನ ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.