ಬಾಲಕಿಯರ ಹಾಸ್ಟೆಲ್ ಬಳಿ ಚಿರತೆ ಪ್ರತ್ಯಕ್ಷ

ಮಧುಗಿರಿ, ಜ. ೧೦- ಪಟ್ಟಣದ ವಿದ್ಯಾನಗರದಲ್ಲಿನ ಬಾಲಕಿಯರ ವಿದ್ಯಾರ್ಥಿನಿಲಯದ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಚಿರತೆಯೊಂದು ಪ್ರತ್ಯಕ್ಷವಾಗುತ್ತಿದೆ ಎಂದು ನಾಗರಿಕರು ಆಂತಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಬಾಲಕಿಯರ ವಿದ್ಯಾರ್ಥಿ ನಿಲಯದ ಸಮೀಪ ಸರಣಿಯಾಗಿ ನಾಯಿ, ಹಂದಿಗಳ ಮರಿಗಳನ್ನು ಚಿರತೆ ಹೊತ್ತೊಯ್ದಿದ್ದು, ಬೆಟ್ಟದ ಸಮೀಪವಿರುವ ಮನೆಯ ಮುಂದೆ ಇದ್ದ ಮೇಕೆಯೊಂದು ಚಿರತೆ ದಾಳಿಯಿಂದ ಸಾವನ್ನಪ್ಪಿದೆ. ಬಾಲಕಿಯರ ಹಾಸ್ಟೆಲ್ ಸಮೀಪ ಸರಿಯಾದ ರಸ್ತೆಯಾಗಲಿ, ವಿದ್ಯುತ್ ದೀಪದ ವ್ಯವಸ್ಥೆಯಾಗಲಿ ಇಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಚಿರತೆ ದಾಳಿಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಹಾಸ್ಟೆಲ್‌ಗೆ ತೆರಳಿ ಬಯೋಮೆಟ್ರಿಕ್ ಹಾಜರಾತಿ ನೀಡಲು ಭಯದ ವಾತಾವರಣದಲ್ಲಿ ತೆರಳಬೇಕಾದ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗಳಿಗೆ ಎದುರಾಗಿದ್ದು, ಸಮಸ್ಯೆ ನಿವಾರಣೆ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಕಳೆದ ಹಲವಾರು ತಿಂಗಳಿನಿಂದ ಹಾಗೂ ಪಟ್ಟಣದ ಲಿಂಗೇನಹಳ್ಳಿಯ ಸಮೀಪವಿರುವ ಕಾರಮರಡಿ ಗುಟ್ಟೆಯಲ್ಲಿನ ದೊಡ್ಡ ಗುಂಡಿನ ಮೇಲೆ ಚಿರತೆ ಕಂಡು ಬರುತ್ತಿದ್ದು, ಆದಷ್ಟು ಬೇಗ ಈ ಚಿರತೆಯನ್ನು ಸೆರೆ ಹಿಡಿಯುವಂತೆ ನಾಗರಿಕರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.