ಬಾಲಕಿಯರ ಉತ್ತಮ ಶಿಕ್ಷಣದಿಂದ ಸಮುದಾಯದ ಏಳಿಗೆ

ವಿಜಯಪುರ:ಜ.14: ಬಡ ವಿದ್ಯಾರ್ಥಿಗಳು ಅದರಲ್ಲೂ ಬಾಲಕಿಯರ ಉತ್ತಮ ಶಿಕ್ಷಣದಿಂದ ಸಮುದಾಯ ಹಾಗೂ ಸಮಾಜದ ಏಳ್ಗೆಯನ್ನು, ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ ಎಂದು ಹಿರಿಯ ಶಿಕ್ಷಣತಜ್ಞ, ‘ಸಿಯಾಸತ್’ ಉರ್ದು ದೈನಿಕದ ಸಂಪಾದಕ ಜಹೀದ್ ಅಲಿ ಖಾನ್ ಕರೆ ನೀಡಿದರು.
ಅವರು ಸಿಕ್ಯಾಬ್ ಸಂಸ್ಥೆಯ ಸಂಸ್ಥಾಪಕರ ಸಿನಾಚರಣೆಯ ಅಂಗವಾಗಿ ನಡೆದ ಬೃಹತ್ ಸಮಾರಂಭದಲ್ಲಿ ‘ಸಿಕ್ಯಾಬ್ ರಾಷ್ಟ್ರೀಯ ಪ್ರಶಸ್ತಿ- 2023’ ಸ್ವೀಕರಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಶಿಕ್ಷಣ ಸಂಸ್ಥೆಗಳ ಹೊಣೆಗಾಗಿಕೆ ಹೊತ್ತಿರುವ ಎಲ್ಲರೂ ಕೆಳವರ್ಗದ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಆದ್ಯತೆ ಮಾಡಿಕೊಳ್ಳಬೇಕು, ಶಿಕ್ಷಣ ಪಡೆಯುವ ಮಕ್ಕಳ ಪಾಲಕರು ಕೂಡ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಸೇವೆ ನೀಡುತ್ತಿರುವ, ಸಮಾಜವನ್ನು ಪ್ರಗತಿಯ ಕಡೆ ಕೊಂಡೊಯ್ಯುತ್ತಿರುವ ಸಿಕ್ಯಾಬ್ ಸಂಸ್ಥೆಯ ಪರಿಶ್ರಮವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಚ್.ಡಿ. ಆನಂದಕುಮಾರ ಅವರು ಮಾತನಾಡಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಹಿಂದೆ ಬಹುದೊಡ್ಡ ತ್ಯಾಗ, ಸಮಾಜಮುಖಿ ಕಳಕಳಿ ಇರುತ್ತದೆ ಎಂದರು. ಇಂದಿನ ವಿದ್ಯಾರ್ಥಿಗಳಿಗೆ ಸಾಧಿಸಲು ಅನೇಕ ಮಾರ್ಗಗಳಿದ್ದು ಅದರಲ್ಲಿ ಸೂಕ್ತವಾದುದನ್ನು ವಿವೇಚನೆಯಿಂದ ಆಯ್ದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಎ. ಪುಣೇಕರ ಮಾತನಾಡಿ ತಮ್ಮ ಶೈಕ್ಷಣಿಕ ಉದ್ದೇಶ ಸರಳವಾಗಿದ್ದು, ಬಡ, ಅನಾಥ, ಕೆಳವರ್ಗದ ಮಕ್ಕಳಿಗೆ ಶಿಕ್ಷಣ ನೀಡುವುದು, ವಿಜಯಪುರ ಜಿಲ್ಲೆಯನ್ನು ಇನ್ನಷ್ಟು ಎಲ್ಲ ರಂಗಗಳಲ್ಲಿ ಉನ್ನತಿಗೆ ಕೊಂಡೊಯ್ಯಬಹುದಾಗಿದೆ. ಇದು ಎಲ್ಲರ ಸಹಕಾರದಿಂದ ಸಾಧ್ಯ ಎಂದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ರಫಿ ಭಂಡಾರಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ, ಪಂಡಿತ ಸಂಜೀವ ಆಚಾರ್ಯ ಮದಭಾವಿ, ಸೈಯದ ಹೈದರ್ ಪಾಶಾ ಖಾದ್ರಿ, ಅಮೀರ್ ಅಲಿ ಖಾನ್ ಮಾತನಾಡಿದರು.
ಸಿಕ್ಯಾಬ್ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ ಅವರು ಸಿಕ್ಯಾಬ್ ಸಂಸ್ಥೆ ಕಳೆದ 54 ವರ್ಷಗಳಲ್ಲಿ ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು. ಸಂಸ್ಥೆಯ ನಿರ್ದೇಶಕರಾದ ರಿಯಾಜ್ ಫಾರೂಖಿ ಅವರು ಪ್ರಶಸ್ತಿ ಪುರಸ್ಕøತ ಜಹೀದ್ ಅಲಿ ಖಾನ್ ಅವರ ಅಭಿನಂದನಾ ಪತ್ರವನ್ನು ಪ್ರಸ್ತುತಪಡಿಸಿದರು. ಸಂಶ್ಥೆಯ ನಿರ್ದೇಶಕರಾದ ಸಲಾಹುದ್ದೀನ್ ಆಯೂಬಿ ಎಸ್ ಪುಣೇಕರ ಅವರು ರಾಷ್ಟ್ರೀಯ ಪ್ರಶಸ್ತಿಯ ಉದ್ದೇಶ, ಆಯ್ಕೆಯ ಕ್ರಮಗಳನ್ನು ಹಾಗೂ ಸಂಸ್ಥಾಪಕರ ದಿನಾಚರಣೆಯ ಔಚಿತ್ಯವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಇತ್ತಿಚಿಗೆ ನಿಧನರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಅವರಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿಯನ್ನು ಮತ್ತು ನಿಧನರಾದ ನಿರ್ದೇಶಕರು ಹಾಗೂ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಲಿಕ್ ಸಂದಲ್ ವಾಸ್ತುಶಿಲ್ಪ ಕಾಲೇಜಿನ ಪ್ರಾಚಾರ್ಯ ಡಾ. ಅನ್ವರ್ ಇಮಾದುದ್ದೀನ್ ಅವರು ಸಮಾರಂಭಕ್ಕೆ ಸರ್ವರನ್ನೂ ಸ್ವಾಗತಿಸಿದರು. ಪವಿತ್ರ ಖುರಾನ್ ಹಾಗೂ ಭಗವದ್ಗೀತೆಯ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ. ಮಹಮ್ಮದ್ ಅಫ್ಜಲ್, ಪ್ರೊ. ಮನೋಜ ಕೋಟ್ನಿಸ್, ಪ್ರೊ. ಎನ್.ಎಸ್. ಭೂಸನೂರ, ಡಾ. ಖಾದ್ರಿ, ಪ್ರೊ. ಕೆ.ಪಿ. ಸಾದತ್ ಅತಿಥಿಗಳನ್ನು ಪರಿಚಯಿಸಿದರು.
ವಿವಿಧ ವಿಶ್ವವಿದ್ಯಾಲಯಗಳಿಗೆ ಸುವರ್ಣ ಪದಕ ಹಾಗೂ ರ್ಯಾಂಕ್ ಗಳಿಸಿದ ಬಿ.ಎ., ಬಿ.ಎಸ್ಸಿ., ಎಮ್.ಎ., ಎಮ್.ಟೆಕ್., ಬಿ.ಯು.ಎಮ್.ಎಸ್. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಡಾ. ಎಚ್.ಕೆ. ಯಡಹಳ್ಳಿ ನಡೆಸಿಕೊಟ್ಟರು. ಸಿಕ್ಯಾಬ್ ಸಂಸ್ಥೆಯ ಶಾಲಾ-ಕಾಲೇಜುಗಳ ನಿವೃತ್ತಿ ಸಿಬ್ಬಂದಿ ಗೌರವ ಸತ್ಕಾರ ಕಾರ್ಯಕ್ರಮವನ್ನು ಶ್ರೀಮತಿ ರಿಹಾನಾ ಮನಗೂಳಿ, ಗ್ರಂಥರಚನೆ, ಪುಸ್ತಕ ಸಂಪಾದನೆ, ಪಿ.ಎಚ್.ಡಿ. ಪದವಿ ಪೂರೈಸಿದ ಪ್ರಾಧ್ಯಾಪಕರ ಸತ್ಕಾರ ಸಮಾರಂಭವನ್ನು ಶ್ರೀಮತಿ ಕಾಸಾರ ಹಾಗೂ ಪ್ರತಿಭಾನ್ವಿತ ಶಾಲಾ ಬಾಲಕರ ಹಾಗೂ ಸಂಶೋಧನ ನಿಧಿ ದೊರಕಿಸಿಕೊಂಡ ಸಿಬ್ಬಂದಿಯ ಸನ್ಮಾನವನ್ನು ಶ್ರೀಮತಿ ಸುಚೇತಾ ಅಂಗಡಿ ನೆರವೇರಿಸಿದರು.
ಕೊನೆಯಲ್ಲಿ ಸಿಕ್ಯಾಬ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್.ಬಿ. ಖಾದಿರನಾಯ್ಕರ್ ವಂದಿಸಿದರು. ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪಾಲಕರು, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶದ ಹಳೆಯ ವಿದ್ಯಾರ್ಥಿಗಳು ಆಗಮಿಸಿದ್ದರು. ವೇದಿಕೆಯ ಮೇಲೆ ಸಿಕ್ಯಾಬ್ ಪಿಯು ಕಾಲೇಜಿನ ಆಡಳಿತ ಮಂಡಳಿ ಚೇರಮನ್ ನಜೀಬ ಬಕ್ಷಿ, ಮೌಲಾನಾ ಅಬ್ದುಲ್ ಜಬ್ಬಾರ್ ಉಮರಿ, ಮಹಮ್ಮದ್ ಯೂಸುಫ್ ಖಾಜಿ, ಮೌಲಾನಾ ಶಕೀಲ ಅಹ್ಮದ್ ಖಾಸ್ಮಿ, ನಿವೃತ್ತ ಅಧಿಕಾರಿ ಮಹೇಶ ಕ್ಯಾತನ್, ಪ್ರೊ. ಅಬ್ದುಲ ರವೂಫ್ ಬಾಲಸಿಂಗ್ ಉಪಸ್ಥಿತರಿದ್ದರು.