ಬಾಲಕಿಯರ ಅತ್ಯಾಚಾರ ಕೊಲೆ ಆರೋಪಿಗಳಿಗೆ ಶಿಕ್ಷೆ ನೀಡಲು ಆಗ್ರಹ

ಕಲಬುರಗಿ,ಮೆ.18:ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕುದರಿ ಸಾಲೇವಾಡಿ ಗ್ರಾಮದಲ್ಲಿ ಮಾದಿಗ ಸಮಾಜದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಕೈಕಾಲುಗಳನ್ನು ಕಟ್ಟಿ ಬಾವಿಯಲ್ಲಿ ಎಸೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸ್ಥಳದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡುವಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಅಖಿಲ ಕರ್ನಾಟಕ ಟೋಕರೆ ಕೋಲಿ, ಕಬ್ಬಲಿಗ, ಬುಡಕಟ್ಟು ಪಂಗಡಗಳ ಸುಧಾರಣಾ ಸಮಿತಿಯ ವಿಭಾಗೀಯ ಕಚೇರಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೋವಿಡ್ ನಿಯಮಗಳಡಿ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ಸಂತ್ರಸ್ತ ಬಾಲಕಿಯರ ಕುಟುಂಬಕ್ಕೆ ತಲಾ 25 ಲಕ್ಷ ರೂ.ಗಳ ಪರಿಹಾರ ಹಾಗೂ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿಯ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಆದಾಗ್ಯೂ, ಪೋಲಿಸರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸರ್ಕಾರ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಅವರು ಆರೋಪಿಸಿದರು.
ನೆರೆಯ ರಾಜ್ಯ ಆಂಧ್ರದಲ್ಲಿ ಮೇಲ್ಜಾತಿಗೆ ಸೇರಿದ ದಿ. ಸುನಿತಾರೆಡ್ಡಿ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ಸರ್ಕಾರವೇ ಹತ್ಯೆ ಮಾಡಿತು. ಅದೇ ರೀತಿಯ ಶಿಕ್ಷೆಯನ್ನು ಸಾಲೇವಾಡಿ ಪ್ರಕರಣದ ಆರೋಪಿಗಳಿಗೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಬಲತ್ಕಾರ ಮಾಡಿ ಕೊಲೆ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಹೊಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಲಹೆಗಾರ ಅಮೃತ್ ಡಿಗ್ಗಿ, ಖಜಾಂಚಿ ಮಲ್ಲಿಕಾರ್ಜುನ್ ಗುಡಬಾ, ಪ್ರಧಾನ ಕಾರ್ಯದರ್ಶಿ ಅಂಬಣ್ಣ ನರಗೋಧಿ, ಕಾರ್ಯದರ್ಶಿ ಶಿವಕುಮಾರ್ ಕಿರಣಗಿ ಮುಂತಾದವರು ಪಾಲ್ಗೊಂಡಿದ್ದರು.