ಬಾಲಕಿಯರೇ ದೌರ್ಜನ್ಯಗಳನ್ನು ತಡೆಗಟ್ಟುವ ಧೈರ್ಯಹೊಂದಿ- ಅನ್ನಪೂರ್ಣಮ್ಮ.

ಕೂಡ್ಲಿಗಿ.ಸೆ.21:- ಕಿಶೋರಾವಸ್ಥೆಯ ಬಾಲಕಿಯರು ಯುವತಿಯರಾಗುವ ಹಂತವಾಗಿದ್ದು ಈ ಸಮಯದಲ್ಲಿ ಬಾಲಕಿಯರು, ಯುವತಿಯರು ತಮ್ಮ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟುವ ಧೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಕೂಡ್ಲಿಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣಮ್ಮ ಕಿಶೋರಿಯರಿಗೆ ಆತ್ಮ ಸ್ಥೈರ್ಯ ತುಂಬಿದರು.
ಅವರು ಪಟ್ಟಣದ ಸ್ನೇಹ ಸಂಸ್ಥೆ ಆಯೋಜಿಸಿದ್ದ ಕಿಶೋರಿಯರಿಗೆ ಮುಂದಾಳತ್ವದಲ್ಲಿ ಸಂಶೋಧನಾ ತರಭೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಹಳ್ಳಿಗಳಲ್ಲಿ ಶೋಷಿತ ಸಮುದಾಯಗಳ ಕಿಶೋರಿಯರ ಪರಿಸ್ಥಿತಿ ಯಾರಿಗೂ ಹೇಳಿಕೊಳ್ಳಲಾಗುವುದಿಲ್ಲ, ಅನಕ್ಷರತೆ, ಬಡತನ ಕಿಶೋರಿಯರ ಜೀವನದ ಮೇಲೆ ದುಷ್ಪರಿಣಾಮ ಬೀರಲಿದ್ದು ಬಾಲಕಿಯರು ವಿದ್ಯಾವಂತಾರಾಗುವುದರ ಮೂಲಕ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದರು. ಕಿಶೋರಿಯರು ತಮ್ಮ ಕುಟುಂಬಗಳಲ್ಲಿ ಹಾಗೂ ತಮ್ಮ ಊರುಗಳಲ್ಲಿ ಇನ್ನಿತರ ಬಾಲಕಿಯರ, ಯುವತಿಯರ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದ್ದು ಬಾಲ್ಯವಿವಾಹದಂತಹ ಮಹಾ ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ಕಿಶೋರಿಯರ ಪಾತ್ರ ಮಹತ್ವದ್ದಾಗಿದೆ ಎಂದರು.
ಸ್ನೇಹ ಸಂಸ್ಥೆಯ ಕಾರ್ಯಕರ್ತೆ ಸರೋಜಾ ಹವಳದ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ ೧೦ ಹಳ್ಳಿಗಳಲ್ಲಿ ಸ್ನೇಹ ಸಂಸ್ಥೆ ಕಿಶೋರಿಯರ ಸಂಘಗಳನ್ನು ಪ್ರಾರಂಭ ಮಾಡಿದ್ದು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು, ಬಾಲಕಾರ್ಮಿಕ ಪದ್ದತಿ, ಬಾಲ್ಯವಿವಾಹ ಪದ್ದತಿ, ದೇವದಾಸಿ ಪದ್ದತಿ ನಿರ್ಮೂಲನೆ ಸೇರಿದಂತೆ ಇನ್ನಿತರ ತಮ್ಮ ಸಮಸ್ಯೆಗಳನ್ನು ತಾವೇ ಸಂಶೋಧನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯವಾದ ತರಭೇತಿ ನೀಡಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದ ಇಲಾಖೆಗಳ ಸಹಕಾರ ದೊರೆಯುವುದು ಎಂದರು. ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ವಿವಿಧ ಇಲಾಖೆಗಳಿಂದ ಸಿಗುವ ಸಹಕಾರ ಮತ್ತು ಸೌಲಭ್ಯಗಳ ಬಗ್ಗೆಯೂ ತರಬೇತಿಯಲ್ಲಿ ಕಿಶೋರಿಯರಿಗೆ ನೀಡಲಾಗಿದ್ದು ಬಾಲಕಿಯರು, ಯುವತಿಯರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಈ ತರಭೇತಿ ಸಹಕಾರಿಯಾಗಲಿದೆ ಎಂದರು. ಕಿಶೋರಿಯರು ಕಾರ್ಯಾಗಾರದಲ್ಲಿ ೩೫ ಕಿಶೋರಿಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಅಶ್ವಿನಿ, ಲೇಖಕ ಭೀಮಣ್ಣ ಗಜಾಪುರ, ಸ್ನೇಹ ಸಂಸ್ಥೆಯ ರಾಧಾ, ಪಾರ್ವತಿ, ರುದ್ರಪ್ಪ, ಕಿಶೋರಿ ಗೌತಮಿ ಉಪಸ್ಥಿತರಿದ್ದರು. ಪಾರ್ವತಿ ಸ್ವಾಗತಿಸಿದರು. ಸರೋಜಾ ನಿರೂಪಿಸಿದರು. ರಾಧಾ ವಂದಿಸಿದರು.