
ದೇವದುರ್ಗ,ಮಾ.೦೬- ಪುರುಷರಿಗೆ ಸಮಾನವಾಗಿ ಬೆಳೆಯುವ ಶಕ್ತಿ, ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಮಹಿಳೆಯರಲ್ಲೂ ಇದೆ. ಇದನ್ನು ಹಲವು ಸಮಯ, ಸಂದರ್ಭ ಹಾಗೂ ಸರ್ವರಂಗದಲ್ಲೂ ಮಹಿಳೆಯರು ಸಮರ್ಥರು ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ ಹೇಳಿದರು.
ಪಟ್ಟಣ ವ್ಯಾಪ್ತಿಯ ಹಳ್ಳದರಾಯನದೊಡ್ಡಿಯ ನಮ್ಮ ಕ್ಲಿನಿಕ್ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹೆಣ್ಣು ಮಕ್ಕಳಿಂದ ಸೈಕಲ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ತೊಟ್ಟಿಲು ತೂಗುವ ಕೈ ಜಗತ್ತನ್ನು ಹಾಳಬಹುದು ಎಂದು ಹಲವು ಸಾಧಕರು ನಿರೂಪಿಸಿದ್ದಾರೆ. ಹೀಗಾಗಿ ಪಾಲಕರು ಹೆಣ್ಣು ಗಂಡು ಭೇದಭಾವ ಮಾಡದೆ ಇಬ್ಬರನ್ನೂ ಎರಡು ಕಣ್ಣುಗಳಂತೆ ಕಾಳಜಿ ಮಾಡಿ ಸಾಕಬೇಕು ಎಂದು ಸಲಹೆ ನೀಡಿದರು.
ಪ್ರಯೋಗ ಶಾಲಾ ತಂತ್ರಜ್ಞಾನಾಧಿಕಾರಿ ಪೂರ್ಣಿಮಾ ಮಾತನಾಡಿ, ಜಗತ್ತು ಮಾತ್ರದಲ್ಲಿ ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆದಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಕ್ರೀಡಾರಂಗ, ಸಿನಿಮಾ, ರಂಗಭೂಮಿಕಲೆ, ಕೃಷಿ, ಬುಷಿನೆಸ್ ಸೇರಿ ಹಲವು ರಂಗದಲ್ಲಿ ಸಾಧನೆ ಮಾಡಿದ್ದಾರೆ. ಅಂಥವರು ಇಂದಿನ ಬಾಲಕಿಯರಿಗೆ ಪ್ರೇರಣೆಯಾಗಬೇಕು ಎಂದರು.
ಪುರಸಭೆ ಸದಸ್ಯ ರಂಗಪ್ಪ, ಹಳ್ಳದ ಪೂಜಾರಿ, ಅಯ್ಯಮ್ಮ ರಂಗಪ್ಪ ಮಟ್ಲೆರ್‌ದೊಡ್ಡಿ, ಜಿ.ಎಂ.ರಾಜು, ಆಶಾ ಕಾರ್ಯಕರ್ತೆಯರಾದ ದೀಪಾ, ತಾಯಮ್ಮ, ನಾಗಮ್ಮ, ಶಾಂತಮ್ಮ ಇತರರಿದ್ದರು.