ಬಾಲಕಿಗೆ ಲೈಂಗಿಕ ಕಿರುಕುಳ: ಮೂವರ ಸೆರೆ

ಮಂಗಳೂರು, ಮಾ.೨೮- ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶನಿವಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮುಹಮ್ಮದ್ ಮುನೀರ್, ಪೊಳಲಿ ನಿವಾಸಿ ತಸ್ವಿನ್‌ ಹಾಗೂ ಕೈಕಂಬ ನಿವಾಸಿ ಸಾದಿಕ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ಆಯುಕ್ತ ಎನ್.ಶಶಿ ಕುಮಾರ್, ಈ ಆರೋಪಿಗಳು ಪತಿಯರು ವಿದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸುತ್ತಾರೆ. ಬಳಿಕ ಅವರೊಂದಿಗೆ ಮಾತುಕತೆ ಆರಂಭಿಸುತ್ತಾರೆ. ಬಳಿಕ ಅವರೊಂದಿಗೆ ಕಾರಿನಲ್ಲಿ ಸಂಚಾರ ಮಾಡಲು ಆರಂಭಿಸುತ್ತಾರೆ. ಹಾಗೆಯೇ ಆ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಈ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸಂತ್ರಸ್ಥೆಯರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಇಂತಹ ಅನೇಕ ಗುಂಪುಗಳು ಗುರುಪುರ-ಕೈಕಂಬ ಪ್ರದೇಶದಲ್ಲಿ ಸಕ್ರಿಯವಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ” ಎಂದು ತಿಳಿಸಿದ್ದಾರೆ. “ಈ ವಿಷಯವು ಪೋಷಕರ ಗಮನಕ್ಕೆ ಬಂದಿದ್ದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ” ಎಂದು ಅವರು ಹೇಳಿದರು. “ಪ್ರಾಥಮಿಕ ತನಿಖೆಯಲ್ಲಿ, ಸ್ನೇಹದ ನೆಪದಲ್ಲಿ ಹುಡುಗಿಯರನ್ನು ಗುರಿಯಾಗಿಸಿಕೊಂಡು, ನಂತರ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಈ ಪ್ರಕರಣದಲ್ಲಿ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆ ಎಂದು ನಮಗೆ ತಿಳಿದು ಬಂದಿದೆ. ಆದ್ದರಿಂದ ಹೆಚ್ಚಿನ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಶಂಕೆ ನಮಗೆ ಉಂಟಾಗಿದೆ. ಆದ್ದರಿಂದ ಬಲಿಪಶುಗಳು ಮುಂದೆ ಬಂದು ಮಾಹಿತಿಯನ್ನು ಹಂಚಿಕೊಳ್ಳಲು ನಾನು ಒತ್ತಾಯಿಸುತ್ತೇನೆ ಎಂದೂ ಮನವಿ ಮಾಡಿದರು. ಮುನೀರ್ ವೃತ್ತಿಯಲ್ಲಿ ಚಾಲಕ ಮತ್ತು ಇತರ ಇಬ್ಬರು ಸಹ ಅಪರಾಧ ಇತಿಹಾಸವನ್ನು ಹೊಂದಿದ್ದಾರೆ. ಒಳ್ಳೆಯ ಉಡುಪನ್ನು ಧರಿಸಿ, ತಮ್ಮದಲ್ಲದ ಐಷಾರಾಮಿ ಕಾರುಗಳಲ್ಲಿ ಸುತ್ತಾಡುವ ಈ ಯುವಕರ ಗ್ಯಾಂಗ್‌ಗಳಿಂದ ಹೆಣ್ಣು ಮಕ್ಕಳು ಮೋಸ ಹೋಗುತ್ತಿದ್ದಾರೆ ಎಂದು ಪ್ರದೇಶದ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಆರೋಪಿಗಳು ತಮ್ಮ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದನ್ನು ತಡೆಯಲು ಅನೇಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಅವರಿಗೆ ಚಿನ್ನ, ಆಭರಣಗಳು ಅಥವಾ ಹಣವನ್ನು ನೀಡುತ್ತಾರೆ. ಈ ಗ್ಯಾಂಗ್‌ಗಳು ಪ್ರಭಾವಶಾಲಿಗಳಾಗಿದ್ದು, ಸಮಾಜದ ಉನ್ನತ ವ್ಯಕ್ತಿಗಳೊಂದಿಗೆ ಅವರಿಗೆ ಸಂಪರ್ಕವಿದೆ ಎಂದು ಸ್ಥಳೀಯರು ಹೇಳುತ್ತಾರೆ.