ಬಾಲಕಾರ್ಮಿಕ ಪದ್ಧತಿ ತೊಡೆದು ಹಾಕಲು ಸಾರ್ವಜನಿಕರೂ ಕೈಜೋಡಿಸಿ


ಗದಗ, ಜೂ. 12 : ಬಾಲಕಾರ್ಮಿಕ ಪದ್ದತಿ ಸಮಾಜಕ್ಕೆ ಅಂಟಿರುವ ಪಿಡುಗು. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾರ್ವಜನಿಕರೂ ಕೈಜೋಡಿಸುವ ಮೂಲಕ ಬಾಲಕಾರ್ಮಿಕರನ್ನು ಸಮಾಜ ಮುಖ್ಯವಾಹಿನಿಗೆ ತರಲು ನಾವೆಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಬಸವರಾಜ ಹೇಳಿದರು.
ಅವರು ಸೋಮವಾರ ಗದುಗಿನ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗದಗ ಜಿಲ್ಲಾಡಳಿತ, ಜಿ,ಪಂ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ (ರಿ), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿಯನ್ನು ಹೊಡೆದೊಡಿಸಲು ಸರಕಾರ ಹಲವಾರು ಕ್ರಮಗಳನ್ನು ಜರುಗಿಸಿದೆ ಜೊತೆಗೆ ಕಾಯ್ದೆ ಕಾನೂನುಗಳನ್ನು ರಚಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೂ ಅಲ್ಲಲ್ಲಿ ಇನ್ನೂ ಬಾಲಕಾರ್ಮಿಕ ಪದ್ಧತಿ ಜಾರಿಯಲ್ಲಿರುವದು ವಿಷಾಧನೀಯ. ಕಾನೂನಿಗೆ ಬಲ ಬರಬೇಕಾದರೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದರು.
ಮುಖ್ಯ ಅತಿಥಿ ಹಿರಿಯ ದಿವಾಣಿ ನ್ಯಾಯಾಧೀಶರೂ ಹಾಗೂ ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಕೆ.ಗುರುಪ್ರಸಾದ ಅವರು ಮಾತನಾಡಿ ಶತಮಾನದಿಂದಲೂ ನಡೆದುಕೊಂಡು ಬಂದಿರುವ ಈ ಬಾಲಕಾರ್ಮಿಕ ಪದ್ಧತಿಯನ್ನು ಕಠಿಣವಾದ ಕಾನೂನು, ಕಾನೂನು ತಿದ್ದುಪಡಿಯಿಂದ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಾಗಲೂ ಬಾಲಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಈ ಕಾರ್ಯಕ್ಕೆ ಪಾಲಕ ಪೋಷಕರು, ಸಮಾಜ, ಸಾರ್ವಜನಿಕರಲ್ಲಿ ಜಾಗೃತಿ ಬರಬೇಕಿದೆ ಎಂದರು.
ದೇಶದ ಪ್ರಗತಿಗೆ ಕಂಟಕವಾಗಿರುವ ಈ ಪದ್ಧತಿ ತೊಡೆದು ಹಾಕಲು ತಿಳುವಳಿಕೆ, ಜಾಗೃತಿ, ಶಿಕ್ಷಣ ಅವಶ್ಯ ಎಂದ ಅವರು ಸದೃಢ ದೇಶ, ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿ ಶಾಲಾ ಮಕ್ಕಳಿಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಪ್ರಮಾಣ ವಚನ ಬೋಧಿಸಿದರು.
ಗದಗ ಶಹರ ಬಿಇಓ ಜಯಶ್ರೀ ವರೂರ, ನಿವೃತ್ತ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ, ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸುವ ಬಗೆಗೆ ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಭೀಮರಾವ್ ಜಾಧವ ವಿಶ್ವ ಬಾಲಕಾರ್ಮಿಕ ದಿನಾಚರಣೆಯ ಔಚಿತ್ಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಚೇಂಬರ್ ಅಧ್ಯಕ್ಷ ಮದುಸೂಧನ ಪುಣೇಕರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ರಾಧಾ ಮಣ್ಣೂರ, ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಪಿ.ಬಿ.ವಸ್ತ್ರದ, ಸಮಾಜ ಕಲ್ಯಾಣ ಇಲಾಖೆಯ ಶ್ರೀಮತಿ ವಿಜಯಲಕ್ಷ್ಮೀ, ಕಾರ್ಮಿಕ ನಿರೀಕ್ಷಕ ಉಮೇಶ ಹುಲ್ಲಣ್ಣವರ, ಗದಗ ಶಹರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಫಾರೂಕಿ ಉಪಸ್ಥಿತರಿದ್ದರು.