ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಲುಅಧಿಕಾರಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು

ಕಲಬುರಗಿ,ಜು.30:ತಾಲೂಕು ಅಡಳಿತ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಕಲಬುರಗಿ, ಚೈಲ್ಡ್‍ಲೈನ್ 1098 ಕಲಬುರಗಿ ಮತ್ತು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ (ಕಲಂ 16 ಮತ್ತು 17)” ಕುರಿತು ಚಿಂಚೋಳಿ ತಾಲೂಕಿನ ಚಂದಾಪೂರ ತಾಲೂಕಾ ಪಂಚಾಯತ್ ಕಚೇರಿಯ ತರಬೇತಿ ಸಭಾಂಗಣದಲ್ಲಿ ಅನುಷ್ಠಾನಾಧಿಕಾರಿಗಳಿಗೆ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಚಿಂಚೋಳಿ ಉಪ ತಹಶೀಲ್ದಾರ ರಮೇಶ್ ಅವರು ಉದ್ಘಾಟಿಸಿದರು.

  ನಂತರ ಅವರು ಮಾತನಾಡಿ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಲು ಎಲ್ಲಾ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು. 
 ಕಾರ್ಯಾಗಾರದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ ಅವರು ಸಂಸ್ಥೆಯು ಪ್ರಸ್ತುತ ಚಿಂಚೋಳಿ ತಾಲೂಕಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಿಂದ ಮಕ್ಕಳ ಹಕ್ಕುಗಳ ಗುಂಪಿನ ರಚನೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಸಂಜೆ ಶಾಲೆಗಳ ಮುಖಾಂತರ ಪೂರಕ ಶಿಕ್ಷಣ, ಪೋಷಕರಿಗೆ ಮತ್ತು ಮಕ್ಕಳಿಗೆ ಶಿಕ್ಷಣ ಕುರಿತು ಜಾಗೃತಿ ನೀಡುವ ಮೂಲಕ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರಲು ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬಾಲನ್ಯಾಯ ಮಂಡಳಿಯ ಸದಸ್ಯರು ಹಾಗೂ ನ್ಯಾಯವಾದಿಗಳಾದ ಗೀತಾ ಸಜ್ಜನಶೆಟ್ಟಿ ಮಾತನಾಡಿ, ಅಧಿಕಾರಿಗಳ ಕರ್ತವ್ಯಗಳು, ಬಾಲಕಾರ್ಮಿಕ ಮಕ್ಕಳು ಕಂಡು ಬಂದಲ್ಲಿ ಅಧಿಕಾರಿಗಳು ಯಾವ ರೀತಿಯಲ್ಲಿ ಕ್ರಮಗಳನ್ನು ಜರುಗಿಸಬೇಕು ಹಾಗೂ ದೂರುಗಳನ್ನು ದಾಖಲಿಸಬೇಕು. ಪೊಲೀಸರಿಗೆ ಸ್ವಯಂ ದೂರು ದಾಖಲಿಸಲು ಇರುವ ವಿಶೇಷ ಅಧಿಕಾರ ಕುರಿತು ಮಾಹಿತಿ ನೀಡಿದಲ್ಲದೇ ಗ್ರಾಮಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಾಲಕಾರ್ಮಿಕ ಮಕ್ಕಳು ತಮ್ಮ ಪಂಚಾಯತ್ ಮಟ್ಟದಲ್ಲಿ ಕಂಡಲ್ಲಿ ಯಾವ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು. ಬಾಲಕಾರ್ಮಿಕ ಮುಕ್ತ ಗ್ರಾಮವನ್ನಾಗಿ ಮಾಡಲು ಯಾವ ರೀತಿಯಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಅವರು ಕಾರ್ಯಾಗಾರದಲ್ಲಿ ಅನುಷ್ಠಾನಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಭರತೇಶ ಶೀಲವಂತರ ಮಾತನಾಡಿ, ಬಾಲಕಾರ್ಮಿಕ ಮಕ್ಕಳ ರಕ್ಷಣೆ, ಪೋಷಣೆ ಮತ್ತು ಪುರ್ನವಸತಿ ಕುರಿತು ಸವಿವರವಾಗಿ ಮಾಹಿತಿಯನ್ನು ನೀಡಿದಲ್ಲದೇ ಜಿಲ್ಲೆಯಲ್ಲಿ ಯಾವುದೇ ಮಗುವು ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ ಅಥವಾ ಸಮಸ್ಯೆಗಳಿಗೆ ಸಿಲುಕಿದ್ದಲ್ಲಿ ಅವರ ರಕ್ಷಣೆ ಮತ್ತು ಪೋಷಣೆ ಜವಾಬ್ದಾರಿಯು ಜಿಲ್ಲಾ ಮಟ್ಟದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ್ದಾಗಿರುತ್ತದೆ. 0-18 ವರ್ಷದ ಒಳಗಿನ ಮಕ್ಕಳಿಗೆ ಏನೇ ಸಮಸ್ಯೆಗಳು ಇದ್ದಲ್ಲಿ ಯಾರೂ ಬೇಕಾದರೂ ಈ ಘಟಕವನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದರು.
ವಿಶೇಷ ಅಹ್ವಾನಿತರಾಗಿ ಬೆಂಗಳೂರಿನ ಡೆಪ್ಯೂಟಿ ರಿಜಿನಲ್ ಸೌತ್ ಏಶಿಯಾ ಕೋರ್ಡಿನೇಟರ್ ಟಿ.ಡಿ.ಎಚ್ (ಜಿ) ರೆಜಿ ಪಿ.ಇ. ಮಾತನಾಡಿದರು. ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣಾ ದೇಸಾಯಿ ಮಾತನಾಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳಿಗೆ ರಕ್ಷಣೆ ಮತ್ತು ಪೋಷಣೆಗಾಗಿ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

 ಕಾರ್ಯಾಗಾರದಲ್ಲಿ ಕಲಬುರಗಿ ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ್ ಮಾತನಾಡಿ, ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ಸೀಗುವ ವಿವಿಧÀ ಸೌಲಭ್ಯಗಳು, ಅದನ್ನು ಹೇಗೆ ಪಡೆದುಕೊಳ್ಳಬೇಕು. ಇರುವ ಮಾನದಂಡಗಳು ಕುರಿತು, ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಲ್ಲಿ ಅವರಿಗೆ ಇರುವ ವಿದ್ಯಾರ್ಥಿ ವೇತನ ಮತ್ತು ಇನ್ನಿತರ ಯೋಜನೆಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. 
  ಕಾರ್ಯಗಾರದ ಅಧ್ಯಕ್ಷತೆವಹಿಸಿ ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ ನಾಯ್ಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಮತ್ತು ಹೋಲಿಗೆ ವೃತಿಪರ ತರಬೇತಿ ಪಡೆದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 
 ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಚಪ್ಪಾ ಭದ್ರಶೆಟ್ಟಿ, ಮೈಸೂರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಕಾರ್ಯದರ್ಶಿ ಜೋಸ್ ವಿ.ಕೆ., ಬೆಂಗಳೂರಿನ ಟಿ.ಡಿ.ಎಚ್ (ಜಿ) ಪ್ರೋಜೆಕ್ಟ್ ಲೀಡರ್ ಸಂಥಿಯಾ, ಚಿಂಚೋಳಿ ಅರಕ್ಷಕ ವೃತ್ತ ಪೊಲೀಸ್ ಕಚೇರಿಯ ವೃತ್ತ ಪೊಲೀಸ್ ನಿರೀಕ್ಷಕ ಮಹಂತೇಶ್ ಪಾಟೀಲ್, ಕಲಬುರಗಿ 1098 ಚೈಲ್ಡ್‍ಲೈನ್ ನೋಡಲ್ ಸಂಯೋಜಕರಾದ ವಿಠ್ಠಲ ಚಿಕಣಿ, ಶ್ರೀ.ಬಸವರಾಜ್ ತೆಂಗಳಿ, ಸುಂದರ ಉಪಸ್ಥಿತರಿದ್ದರು. 

ಈ ಕಾರ್ಯಗಾರದಲ್ಲಿ ತಾಲೂಕಾ ಪಂಚಾಯತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಚೈಲ್ಡ್‍ಲೈನ್ 1098 ಕಲಬುರಗಿ ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 75ಕ್ಕೂ ಹೆಚ್ಚಿನ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸ್ವಾಗತಿಸಿದರು. ಮೈಸೂರು ಗ್ರಾಮೀಣ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಯೋಜನಾ ಸಂಯೋಜಕರಾದ ಸಂಪತ್ ಕಟ್ಟಿ, ಸರುಬಾಯಿ ದೊಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು.