
ಚಾಮರಾಜನಗರ, ಮೇ.20:- ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ತಪಾಸಣೆ ನಡೆಸಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಂದ ದುಡಿಸಿಕೊಳ್ಳುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಬಾಲಕಾರ್ಮಿಕಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ಹೋಗಲಾಡಿಸುವಲ್ಲಿ ವಿಶೇಷ ಪರಿಶ್ರಮ ವಹಿಸಬೇಕು. ಕಾರ್ಮಿಕ ಇಲಾಖೆ ವತಿಯಿಂದ ಹೋಬಳಿವಾರು ತಂಡ ರಚಿಸಿ ಬಾಲ್ಯದಲ್ಲೇ ಮಕ್ಕಳಿಂದ ದುಡಿಸಿ ಕೊಳ್ಳುವವರು ಎಲ್ಲಿಯೇಕಂಡು ಬಂದಲ್ಲಿಕೂಡಲೇ ಕಾನೂನು ಪ್ರಕಾರ ಸಂಬಂಧಪಟ್ಟವರ ವಿರುದ್ದಗಂಭೀರಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್‍ಅಭಿವೃದ್ದಿ ಅಧಿಕಾರಿಗಳನ್ನು ಬಾಲಕಾರ್ಮಿಕರ ಪತ್ತೆಕಾರ್ಯಾಚರಣೆಗೆ ತೊಡಗಿಸಿಕೊಳ್ಳಬೇಕು. ಎಷ್ಟು ಮಕ್ಕಳು ಶಾಲೆ ತೊರೆದಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಬೇಕು. ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಕೆಲಸದಿಂದ ಬಿಡಿಸಿ ಶಾಲೆಗೆ ದಾಖಲು ಮಾಡಬೇಕು. ಮಕ್ಕಳ ಪೋಷಕರಿಗೂ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಪಟ್ಟಣ ಪ್ರದೇಶಗಳಲ್ಲಿಯೂ ಬಾಲಕಾರ್ಮಿಕ ಪದ್ದತಿ ವಿರುದ್ದಅನಿರೀಕ್ಷಿತವಾಗಿ ದಾಳಿ ನಡೆಸಬೇಕು. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣಕಾಯ್ದೆ ಸೆಕ್ಷನ್ 17ರಡಿ ನೇಮಕಗೊಂಡಿರುವ ವಿವಿಧ ಇಲಾಖೆಗಳ ನಿರೀಕ್ಷಕರು ಕಾಲಕಾಲಕ್ಕೆ ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿರುವವರ ವಿರುದ್ದ ಕಾನೂನು ಕ್ರಮ ವಹಿಸಲು ಅವಕಾಶವಿದೆ. ಇಲಾಖೆಗಳ ನಿರೀಕ್ಷಕರು ವ್ಯಾಪಕವಾಗಿತಪಾಸಣೆಕೈಗೊಂಡು ಬಾಲಕಾರ್ಮಿಕ ಪದ್ದತಿ ವಿರುದ್ದ ಕ್ರಮಜರುಗಿಸಬೇಕೆಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ನಿರ್ದೆಶನ ನೀಡಿದರು.
ಸಮಾಜಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ದತಿ ತೊಡೆದು ಹಾಕಲು ಹೆಚ್ಚಿನಜಾಗೃತಿಉಂಟು ಮಾಡಬೇಕಿದೆ. ಶಾಲಾ ಕಾಲೇಜುಗಳು ಸೇರಿದಂತೆ ವಿವಿಧೆಡೆ ಅರಿವು ಕಾರ್ಯಕ್ರಮಗಳ ಮೂಲಕ ಬಾಲ್ಯದಲ್ಲಿಯೇ ಮಕ್ಕಳನ್ನು ದುಡಿಮೆಗೆ ದೂಡುವುದರಿಂದ ಎದುರಿಸಬೇಕಾದ ಕಾನೂನು ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿಗೋಡೆಬರಹ, ಕರಪತ್ರ, ಬೀದಿ ನಾಟಕ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಜಿಲ್ಲಾಕಾರ್ಮಿಕ ಅಧಿಕಾರಿ ಎಂ. ಸವಿತಾ ಅವರು ಮಾತನಾಡಿ ಇದೇ ಜೂನ್ ತಿಂಗಳಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ಮಾಸವನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಬಾಲಕಾರ್ಮಿಕ ಪದ್ದತಿ ಮೂಲೋತ್ಪಾಟನೆಗೆ ಅಗತ್ಯ ವಿರುವ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಇಲಾಖೆ ವತಿಯಿಂದ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯವರಾದ ಸರಸ್ವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಡಿವೈಎಸ್‍ಪಿ ಅನ್ಸರ್ ಅಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದಗೀತಾಲಕ್ಷ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ಮಂಜುನಾಥ್, ಜಿಲ್ಲಾ ಬಾಲ ಕಾರ್ಮಿಕಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ. ಮಹೇಶ್, ಕಾರ್ಮಿಕ ನಿರೀಕ್ಷಕರಾದ ನಾರಾಯಣಮೂರ್ತಿ, ಲಕ್ಷ್ಮೀಶ ಇತರರು ಸಭೆಯಲ್ಲಿ ಹಾಜರಿದ್ದರು.