ಬಾಲಕಾರ್ಮಿಕ ಪದ್ದತಿ ನಿಷೇಧ- ಅರಿವು ಮೂಡಿಸಿ

ಕೋಲಾರ,ಏ.೬: ನಗರ ಪ್ರದೇಶದಲ್ಲಿ ಹೆಚ್ಚು ಬಾಲಕಾರ್ಮಿಕರು ಕಂಡು ಬರುತ್ತಿದ್ದಾರೆ. ಆದ್ದರಿಂದ ಬಾಲಕಾರ್ಮಿಕ ಪದ್ದತಿ ನಿಷೇದ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಮಕ್ಕಳಿಗೆ ಸೂಕ್ತ ಭದ್ರತೆ ಮತ್ತು ಶಿಕ್ಷಣವನ್ನು ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಇಟ್ಟಿಗೆ ಕಾರ್ಖಾನೆಗಳು ಮತ್ತು ಹೊಟೇಲ್‌ಗಳಲ್ಲಿ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು. ಗ್ರಾಮ ಸಭೆ, ನಗರ ಸಭೆಗಳಲ್ಲಿ ಭಾಗವಹಿಸಿ ಬಾಲಕಾರ್ಮಿಕ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ವಾಸಿಸುವ ಸ್ಥಳಗಳಲ್ಲಿ ಸ್ಟಿಕ್ಕರ್‍ಗಳನ್ನು ಅಂಟಿಸುವುದು, ಕರಪತ್ರಗಳನ್ನು ಹಂಚಿಕೆ ಮಾಡುವುದು. ಜಿಲ್ಲೆಯಾದ್ಯಂತ ಆಟೋ ಮತ್ತು ಮೈಕ್ ಮುಖಾಂತರ ಪ್ರಚಾರ, ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಮುಂತಾದಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಿ ಎಂದು ತಿಳಿಸಿದರು. ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ
ಭದ್ರತೆ ಮತ್ತು ಅವರ ಪೋಷಕರಿಗೆ ಬಾಲ ಕಾರ್ಮಿಕಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಿ, ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಯಾವುದೇ ರೀತಿಯ
ತೊಂದರೆಯಾಗದಂತೆ ಅವರಿಗೆ ವಸತಿ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಧಿಕಾರಿಗಳು ಪ್ರತಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಬೇಕು ಎಂದು
ಸೂಚಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀಕಾಂತ್ ಬಿ. ಪಾಟೀಲ್ ಅವರು ಮಾತನಾಡಿ, ೨೦೨೦-೨೧ನೇ ಸಾಲಿನಲ್ಲಿ ವಿವಿಧ ಇಲಾಖೆಗಳ ಹಾಗೂ ಬಾಲಕಾರ್ಮಿಕ ಕಾಯ್ದೆ ಕಲಂ ೧೭ರ ನಿರೀಕ್ಷಕರುಗಳ, ಸ್ವಯಂ ಸೇವಾ ಸಂಸ್ಥೆಗಳ ಹಾಗೂ ತಾಲ್ಲೂಕು ಬಾಲಕಾರ್ಮಿಕ ನೇಮಕಾತಿ ನಿರ್ಮೂಲನಾ ಪುನರ್ ವಸತಿ ಸಮಿತಿ ಸಹಯೋಗದೊಂದಿಗೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಬಾಲಕಾರ್ಮಿಕ ಮಕ್ಕಳ ಸಮೀಕ್ಷೆಯನ್ನು ನಡೆಸಿ ೧೬ ಮಕ್ಕಳನ್ನು ಪತ್ತೆಹಚ್ಚಲಾಯಿತು. ಮಕ್ಕಳನ್ನು ದುಡಿಮೆಯಿಂದ ಬಿಡುಗಡೆಗೊಳಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ ಅವರ ನಿರ್ದೇಶನದಂತೆ ಪುನರ್‍ವಸತಿಗೊಳಿಸಲಾಯಿತು ಹಾಗೂ ಸಕ್ಷಮ
ಪ್ರಾಧಿಕಾರದಲ್ಲಿ ಸಿ.ಆರ್.ಪಿ.ಸಿ ೨೦೦ ಅಡಿಯಲ್ಲಿ ಮೊಕದ್ದಮೆಯನ್ನು ಹೂಡಲಾಗಿದೆ ಎಂದು ತಿಳಿಸಿದರು.
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯ ಯೋಜನಾ ನಿರ್ದೇಶಕರಾದ ಲಕ್ಷ್ಮಿನಾರಾಯಣ ಅವರು ಮಾತನಾಡಿ ಬಂಗಾರಪೇಟೆ ವೃತ್ತದಲ್ಲಿ ಒಂದು ಬಾಲಕಾರ್ಮಿಕನನ್ನು ಪತ್ತಹಚ್ಚಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಖಾಂತರ ಪುನರ್‍ವಸತಿಗೊಳಿಸಿ, ಕಾನೂನು ಕ್ರಮ ಜರುಗಿಸಲಾಗಿದೆ. ತಪ್ಪಿತಸ್ಥ ಮಾಲೀಕರಿಂದ ಒಂದು ಪ್ರಕರಣದಲ್ಲಿ ೨೦ ಸಾವಿರ ರೂ.ಗಳನ್ನು ಕಾರ್ಪಸ್ ಪಂಡ್ ವಸೂಲಿ ಮಾಡಲಾಗಿದೆ ಮತ್ತು ಎರಡು ಪ್ರಕರಣಗಳಲ್ಲಿ ೨೦ ಸಾವಿರ ರೂ.ಗಳನ್ನು ದಂಡ ವಸೂಲಿ ಮಾಡಲಾಗಿದೆ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ತಪ್ಪಿತಸ್ಥ ಮಾಲೀಕರಿಂದ ೬೦ ಸಾವಿರ ರೂ.ಗಳನ್ನು ಕಾರ್ಪಸ್ ಪಂಡ್ವಸೂಲಿ ಮಾಡಲಾಗಿದೆ ಹಾಗೂ ೦೨ ಪ್ರಕರಣಗಳಲ್ಲಿ ೨೦ ಸಾವಿರ
ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ತಪಾಸಣೆ ನಡೆಸಲು ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನೇಮಕಾತಿ ಪುನರ್ ವಸತಿ ಸಮಿತಿಯ ತಹಶೀಲ್ದಾರ್ರವರ ಅಧ್ಯಕ್ಷತೆಯಲ್ಲಿ ಹೋಬಳಿವಾರು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಂತೆ ತಂಡಗಳನ್ನು ರಚಿಸಿ
ಕಾರ್ಯ ನಿರ್ವಹಿಸಲಾಗುತ್ತಿದೆ. ಹಾಗೂ ಪ್ರತಿ ಮಾಹೆ ಮಾಸಿಕ ಗುರಿಯಂತೆ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಾಲ್ಲೂಕು ಬಾಲಕಾರ್ಮಿಕ ಸಮಿತಿ ವತಿಯಿಂದ ನಿರ್ದೇಶನ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಬಾಲಕಾರ್ಮಿಕ ವಿಶೇಷ ತರಬೇತಿ ಕೇಂದ್ರಗಳು
ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ತಪಾಸಣೆ ವೇಳೆ ಕಂಡು ಬಂದ ಬಾಲಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಖಾಂತರ ಮುಖ್ಯವಾಹಿನಿ ಶಾಲೆಗಳಿಗೆ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಜಿ.ಪಾಲಿ ಸೇರಿದಂತೆ ಜಿಲ್ಲಾ ಮಟ್ಟದ
ಅಧಿಕಾರಿಗಳು ಉಪಸ್ಥಿತರಿದ್ದರು.