
ಕೋಲಾರ,ಆ,೨೯-ಬಾಲಕಾರ್ಮಿಕರನ್ನು ಗುರುತಿಸಿ ಅವರನ್ನು ಸೂಕ್ತ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಜವಾಬ್ದಾರಿ ಕೇವಲ ಕಾರ್ಮಿಕ ಇಲಾಖೆಯದ್ದು ಮಾತ್ರವಲ್ಲ, ಬದಲಿಗೆ ಕಾರ್ಯಕಾರಿ ಸಮಿತಿಯ ೧೭ ಇಲಾಖೆಗೂ ಸಮಾನ ಜವಾಬ್ದಾರಿ ಇರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಬಾಲ ಕಾರ್ಮಿಕ ಕಾಯ್ದೆ ಅನ್ವಯ ವಾಣಿಜ್ಯೊದ್ದೇಶಗಳಿಗೆ ಬಾಲಕಾರ್ಮಿಕರನ್ನು ಬಳಸಿಕೊಳ್ಳುವುದು ಹಾಗೂ ಅವರ ಹಕ್ಕುಗಳನ್ನು ಕಸಿದುಕೊಳ್ಳುವುದು ಗುರುತರವಾದ ಅಪರಾಧವಾಗಿದೆ ಎಂದರು.
ಬಾಲ ಕಾರ್ಮಿಕರನ್ನು ಕಂಡಲ್ಲಿ ಇದು ಕೇವಲ ಕಾರ್ಮಿಕ ಇಲಾಖೆಯ ಜವಾಬ್ದಾರಿಯೆಂದು ತಪ್ಪಿಸಿಕೊಳ್ಳದೆ ಪ್ರತಿಯೊಂದು ಇಲಾಖೆಯು ಹೊಣೆಯನ್ನರಿತು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು. ಬಾಲ ಕಾರ್ಮಿಕ ಪದ್ದತಿಯ ಸಂತ್ರಸ್ಥರನ್ನು ಸೂಕ್ತ ವ್ಯವಸ್ಥೆಗಳೊಂದಿಗೆ ಮೂರಾರ್ಜಿ ಶಾಲೆ, ಬಾಲ ಮಂದಿರಗಳು ಹಾಗೂ ಸರ್ಕಾರಿ ವಸತಿ ಶಾಲೆಗಳಲ್ಲಿ ಉಳಿದುಕೊಳ್ಳಲು ಕ್ರಮವಹಿಸಬೇಕು. ಮೂರಾರ್ಜಿ ದೇಸಾಯಿ ಶಾಲೆಗಳಲ್ಲಿ ಇಂತಹ ಸಂತ್ರಸ್ಥರಿಗೆ ಶಿಕ್ಷಣಕ್ಕಾಗಿ ಸೀಟುಗಳನ್ನು ಕಾಯ್ದಿರಿಸಲಾಗಿದೆ. ಒಂದು ವೇಳೆ ಇಂತಹ ವಸತಿ ಶಾಲೆಗಳಲ್ಲಿ ಸ್ಥಳಾವಕಾಶ ಲಭ್ಯವಿಲ್ಲದಿದ್ದಲ್ಲಿ ಸರ್ಕಾರಿ ವಸತಿ ಶಾಲೆಗಳಲ್ಲಿ ವಸತಿ ಕಲ್ಪಿಸಲು ಕ್ರಮ ವಹಿಸಬೇಕು. ನಂತರ ಆ ಮಕ್ಕಳ ಬಗ್ಗೆ ಅಧಿಕಾರಿಗಳು ಸೂಕ್ತ ನಿಗಾ ವಹಿಸುತ್ತಿರಬೇಕೆಂದರು.
ಬಾಲಕಾರ್ಮಿಕರು ಕಂಡಲ್ಲಿ ಸ್ಥಳೀಯ ಪೊಲೀಸರು ಹತ್ತಿರದಲ್ಲಿನ ಯಾವುದೇ ಸರ್ಕಾರಿ ಅಧಿಕಾರಿಗಳು ಅಥವಾ ಜವಾಬ್ದಾರಿಯುತ ನಾಗರೀಕರು ತಕ್ಷಣ ಪ್ರತಿಕ್ರಿಯಿಸಿ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಬಹುದಾಗಿದೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ತೋರಬಹುದಾಗಿದೆ.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಕಾರ್ಯಕಾರಿ ಸಮಿತಿಯ ಸಲಹೆ ಮೇರೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಪದ್ಧತಿ ನಿರ್ಮೂಲನ ಆಂದೋಲನದ ಬಗ್ಗೆ ಕರ ಹಾಗೂ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಪದ್ಮಾ ಬಸವಂತಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಆಜ್ಮಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ: ಜಗದೀಶ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.