ಕಲಬುರಗಿ,ಜೂ.16:ತಾಲೂಕಾಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಅಫಜಲಪೂರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ, ವಿಕಾಸ ಸೇವಾ ಸಂಸ್ಥೆ, ಅಫಜಲಪೂರ ಹಾಗೂ ಮಕ್ಕಳ ಸಹಾಯವಾಣಿ-1098 ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಅಫಜಲಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಅಂಗವಾಗಿ “ಬಾಲಕಾರ್ಮಿಕ ನಿರ್ಮೂಲನಾ ಅಭಿಯಾನ ಜಾಥಾ ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಅಫಜಲಪೂರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ನವಲೆ ಅವರು ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಯಾರು ಸಹ ಕೆಲಸಕ್ಕೆ ಇಟ್ಟುಕೊಳ್ಳಬಾರದು ಒಂದು ವೇಳೆ ಯಾರಾದರು ಕೆಲಸಕ್ಕೆ ಇಟ್ಟುಕೊಂಡಿಲ್ಲಿ ಅಂಥವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಹಾಗೆಯೇ ತಂದೆ-ತಾಯಿ ಅವರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿದ್ದಲ್ಲಿ ಅವರ ಮೇಲೆ ಸಹ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಈ ಜಾಥಾವು ತಾಲೂಕು ನ್ಯಾಯಾಲಯದಿಂದ ಆರಂಭಗೊಂಡ ಈ ಜಾಥಾವು ನಗರದ ಮುಖ್ಯರಸ್ತೆ ಮೂಲಕ ಬಸ್ ನಿಲ್ದಾಣದ ಬಂದು ಕೊನೆಗೊಂಡಿತು. ಆಟೋ ಮೂಲಕ ಧ್ವನಿಸುರಳಿ ಮೂಲಕ ಬಿತ್ತಿ ಪತ್ರಗಳು ಹಂಚುವುದರ ಮೂಲಕ “ ಬಾಲ್ಯಾವಸ್ಥೆ ಹಾಗೂ ಕಿಶೊರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 1986 ರಂತೆ ಬಾಲ್ಯಾವಸ್ಥೆ ಹಾಗೂ ಕಿಶೊರಾವಸ್ಥೆ ಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ 20,000 ರೂ. ರಿಂದ 50,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ ಎಂಬುವುದಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಅಫಜಲಪೂರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ನವಲೆ ಅವರು ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಅಫಜಲಪೂರ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್. ಎಲ್.ಪಟೇಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮಾ, ಸಹಾಯಕ ಹಿರಿಯ ಇನ್ಸಪೆಕ್ಟರ್ ರಾಜಶೇಖರ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕ ವಿಠಲ ಚಿಕಣಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಸರಕಾರಿ ಮಾದರಿ ಕನ್ಯಾ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿದ್ಧಲಿಂಗ ರಾಮಗೊಂಡ್, ವಿಕಾಸ ಸೇವಾ ಸಂಸ್ಥೆಯ ನಿರ್ದೇಶಕ ಅಶೋಕ ಶಿವೂರ, ಮಕ್ಕಳ ಸಹಾಯವಾಣಿ ನೋಡಲ್ ಕೇಂದ್ರದ ಜಿಲ್ಲಾ ಸಂಯೋಜಕ ಬಸವರಾಜ ಟೆಂಗಳಿ, ಶೇಠ ಶಂಕರಲಾಲ ಲಾಹೋಟಿ ಕಾಲೇಜು, ಡಾನ್ ಬಾಸ್ಕೋ ಸಂಸ್ಥೆ ಸಂತೋಷ ಕುಮಾರ ಉಪಸ್ಥಿತರಿದ್ದರು.
ಸಂಸ್ಕಾರ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕ ವಿಠ್ಠಲ ಚಿಕಣಿ ಕೊನೆಯಲ್ಲಿ ವಂದಿಸಿದರು.