ಕೋಲಾರ, ಜೂ,೨:ಬಾಲಕಾರ್ಮಿಕ ಎಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸುನಿಲ್ ಎಸ್‌ಹೊಸಮನಿ ಅವರು ತಿಳಿಸಿದರು.
ನಗರದ ದರ್ಗಾಮೊಹಲ್ಲಾದಲ್ಲಿನ ಮೌಲಾನ ಅಜಾದ್ ಮಾದರಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಯಾವುದೇ ಮಕ್ಕಳು ಗ್ಯಾರೇಜ್, ಹೋಟೆಲ್, ಮಟನ್, ಚಿಕನ್ ಶಾಪ್‌ಗಳಲ್ಲಿ ಕೆಲಸಕ್ಕೆ ಹೋಗಬಾರದೆಂದು ತಿಳಿಸಿದರು. ಶಿಕ್ಷಣ ಮಕ್ಕಳ ಮೂಲ ಹಕ್ಕಾಗಿದೆ. ಸಮಾಜದಲ್ಲಿ ಬಾಲಕಾರ್ಮಿಕರನ್ನು ಕಂಡರೆ ಅಂತವರನ್ನು ಗುರುತಿಸಿ ಶಾಲೆಗೆ ಸೇರಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳು ಬಾಲ್ಯಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಶಬಾನಾ ಅಜ್ಮಿರವರು ಮಾತನಾಡಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, ೧೯೮೬ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿ ಕೊಳ್ಳುವುದು ಹಾಗೂ ೧೮ ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರೆಂಟ್ ರಹಿತ ಬಂಧಿಸಬಹುದಾದ) ಅಪರಾಧವಾಗಿದೆ. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, ೧೯೮೬ ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹಮೊದಲ ಅಪರಾಧಕ್ಕೆ ಮಾಲೀಕರಿಗೆ ೬ ತಿಂಗಳಿಂದ ೨ ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ.೨೦,೦೦೦ ರಿಂದ ರೂ.೫೦,೦೦೦ ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತದೆ. ಪುನರಾವರ್ತಿತ ಅಪರಾಧಕ್ಕೆ ೧ ವರ್ಷದಿಂದ ೩ ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದು ವಿವರಿಸಿದರು.
ಹಿರಿಯ ವಕೀಲ ಕೆ.ಆರ್.ಧನರಾಜ್‌ರವರು ಮಾತನಾಡಿ ಮಕ್ಕಳು ಮತ್ತು ಮಹಿಳೆಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವನ್ನು ಪಡೆಯ ಬಹುದಾಗಿದ್ದು, ಮಕ್ಕಳು ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಕುಮಾರಿ ಶೃತಿ. ಡಿ ಹಾಗೂ ಶಾಲೆಯ ಸಿಬ್ಬಂದಿ ಮತ್ತು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.