ಬಾಲಕನ ಸಾವು ಕಲ್ಲು ಕ್ವಾರಿ ಮಾಲೀಕನ ಮೇಲೆ ತಂದೆ ದೂರು

ಕೂಡ್ಲಿಗಿ.ಮೇ. 4 :- ಭಾನುವಾರ ಮದ್ಯಾಹ್ನ ಕಲ್ಲು ಕ್ವಾರಿಯಲ್ಲಿನ ಗುಂಡಿಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿದ್ದು ಶವ ಪತ್ತೆಯಾಗಿರಲಿಲ್ಲ ಆದರೆ ಸೋಮವಾರ ಮಧ್ಯಾಹ್ನ ಬಾಲಕನ ಶವ ಪತ್ತೆಯಾಗಿದ್ದು ಕಲ್ಲು ಕ್ವಾರಿಯ ಮಾಲೀಕ ಈ ಗುಂಡಿಯ ಸ್ಥಳದ ಸುತ್ತ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿರುವುದೇ ನನ್ನ ಮಗನ ಸಾವಿಗೆ ಕಾರಣವೆಂದು ಮೃತನ ತಂದೆ ಮಾಬು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ದೂರು ನೀಡಿದ್ದಾನೆ.
ಮೃತ ಬಾಲಕ ಎಂ. ಷಾಯಿದ್ ಅಫ್ರಿದ್ (16) ಭಾನುವಾರ ಮದ್ಯಾಹ್ನ 3-15ಗಂಟೆ ಸುಮಾರಿಗೆ ಕೂಡ್ಲಿಗಿ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಕೆರೆಯಾಗಿನಹಳ್ಳಿ ಗ್ರಾಮದ ಬಳಿಯ ಶ್ರೀನಿವಾಸ ರಾವ್ ಎಂಬುವವರ ಕಲ್ಲು ಕ್ವಾರಿಯಲ್ಲಿರುವ ಸುಮಾರು 30ಅಡಿ ಆಳದ ನೀರಿನ ಗುಂಡಿ ಇದ್ದು ಜನರು ಅಲ್ಲಿ ಈಜಾಡಲು ಹೋಗಿ ಅಪಾಯವಾಗುವಂತೆ ಇದ್ದರು ಕ್ವಾರಿ ಮಾಲೀಕ ಶ್ರೀನಿವಾಸ ರಾವ್ ಆ ಗುಂಡಿಯ ಬಳಿ ಯಾವುದೇ ಕಾವಲುಗಾರರನ್ನು ನೇಮಿಸದೇ ಹಾಗೂ ಜನರು ನೀರಿನ ಗುಂಡಿ ಬಳಿ ಹೋಗದಂತೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಇದ್ದು ಈ ಗುಂಡಿಯಲ್ಲಿ ನನ್ನ ಮಗನು ಭಾನುವಾರ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆಂದು ಕಲ್ಲು ಕ್ವಾರಿ ಮಾಲೀಕ ಶ್ರೀನಿವಾಸ ರಾವ್ ಮೇಲೆ ಮೃತ ಬಾಲಕನ ತಂದೆ ಮಾಬು ಸೋಮವಾರ ಸಂಜೆ ನೀಡಿದ ದೂರಿನಂತೆ ಕೂಡ್ಲಿಗಿ ಪಿಎಸ್ಐ ಸುರೇಶ ಪ್ರಕರಣ ದಾಖಲಿಸಿಕೊಂಡಿದ್ದಾರೆ.