ಬಾಲಕನ ಕೊಂದ ಹುಲಿ ಬೋನಿಗೆ ಬಿತ್ತು

ಮೈಸೂರು,ಸೆ.೨೦-ಜಿಲ್ಲೆಯಲ್ಲಿ ಎರಡು ವಾರಗಳ ಹಿಂದೆ ಬಾಲಕನನ್ನು ಕೊಂದು ತಿಂದಿದ್ದ ಹುಲಿಯು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದದ್ದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ತಾವರೆನಾಯ್ಕ ಎಂಬುವವರ ಜಮೀನಿನಲ್ಲಿ ಹುಲಿ ಸೆರೆಯಾಗಿದ್ದು, ಸ್ಥಳೀಯರ ಆತಂಕ ನಿವಾರಣೆಯಾಗಿದೆ.
೧೫ ದಿನಗಳ ಹಿಂದೆ ಕಲ್ಲಹಟ್ಟಿ ಗ್ರಾಮದ ೯ ವರ್ಷದ ಚರಣ್ ಎಂಬ ಬಾಲಕನನ್ನು ೫ ವರ್ಷದ ಹುಲಿ ಕೊಂದು ತಿಂದಿತ್ತು. ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಗ್ರಾಮದ ಸುತ್ತ ಹಲವೆಡೆ ಬೋನುಗಳನ್ನು ಇರಿಸಲಾಗಿತ್ತು.
ಆದರೂ ಬೋನಿಗೆ ಬೀಳದೆ ಅಲ್ಲಲ್ಲಿ ಸಾಕು ಪ್ರಾಣಿಗಳನ್ನು ಕೊಂದು ನಾಪತ್ತೆಯಾಗುತ್ತಿದ್ದ ಹುಲಿ ನಿನ್ನೆ ಸಂಜೆ ತಾವರೆನಾಯ್ಕ ಅವರ ಹೋರಿಯನ್ನು ಹುಲಿ ಕೊಂದು ತಿಂದಿದೆ. ಅದರ ಮಾಹಿತಿ ಮೇಲೆ ಹೋರಿ ಸತ್ತ ಜಾಗದಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು.
ಬೋನಿರಿಸಿದ ಕೆಲವೇ ಕ್ಷಣದಲ್ಲಿ ಮೇಕೆ ತಿನ್ನಲು ಬಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಕಾಳಗದಲ್ಲಿ ಗಾಯಗೊಂಡು ಭೇಟೆಯಾಡಲು ಅಶಕ್ತವಾಗಿ ಹುಲಿ ನಾಡಿಗೆ ಬಂದಿದೆ ಎಂದು ಹೇಳಲಾಗಿದೆ.
ಇದೀಗ ಸೆರೆಯಾದ ಹುಲಿ ನೋಡಲು ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವಲಯದಲ್ಲಿ ಬರುವ ಕಲ್ಲಹಟ್ಟಿ ಗ್ರಾಮಸ್ಥರು ಮುಗಿಬಿದ್ದಿದ್ದು ಅಲ್ಲಿಂದ ಹುಲಿಯನ್ನು ಸ್ಥಳಾಂತರಿಸಲಾಗಿದೆ.