ಬಾಲಕನ‌ ಅಪಹರಿಸಿ 4 ಲಕ್ಷಕ್ಕೆ ಬೇಡಿಕೆ ಬಂಧಿತರಾಗುವ ಭೀತಿಯಿಂದ ಕೊಲೆ

ಮೈಸೂರು,ನ.4- ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು 4 ಲಕ್ಷ ರೂಗಳಿಗೆ ಬೇಡಿಕೆಯಿಟ್ಟು ಗುರುತು ಪತ್ತೆಯಾಗುವ ಭೀತಿಯಲ್ಲಿ ಬಾಲಕನನ್ನು ಕೊಲೆ ಮಾಡಿರುವ ಭಯಾನಕ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡಿನಲ್ಲಿ ನಡೆದಿದೆ.
ಹನಗೋಡು ಗ್ರಾಮದ ತರಕಾರಿ ವ್ಯಾಪಾರಿ ನಾಗರಾಜ್​ರ ಪುತ್ರ ಕಾರ್ತಿಕ್(9)ಮೃತ ಬಾಲಕನಾಗಿದ್ದಾನೆ ಮನೆಯ ಬಳಿ ಆಟವಾಡುತ್ತಿದ್ದ ಬಾಲಕ ಕಾರ್ತಿಕ್​ನನ್ನು ದುಷ್ಕರ್ಮಿಗಳು ನಿನ್ನೆ ಸಂಜೆ 7ರ ವೇಳೆಯಲ್ಲಿ ಅಪಹರಿಸಿದ್ದಾರೆ.
ಮನೆಯ ಮುಂದೆ ಇದ್ದ ಬಾಲಕ ಕಣ್ಮರೆಯಾದಾಗ ಪೋಷಕರು ಕಾರ್ತಿಕ್​ನನ್ನು ಹುಡುಕಾಡಿದ್ದಾರೆ.ಈ ವೇಳೆ ಬಾಲಕನ ತಂದೆ ನಾಗರಾಜ್​ಗೆ ಕರೆ ಮಾಡಿದ ಅಪಹರಣಕಾರರು 4 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಇನ್ನಷ್ಟು ಆತಂಕಗೊಂಡ ಪೋಷಕರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಳಿಕ ಎಸ್.ಪಿ. ಚೇತನ್, ಎಎಸ್ ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ರವಿಪ್ರಸಾದ್ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್​ಗಳಾದ ಚಿಕ್ಕಸ್ವಾಮಿ, ರವಿ, ರವಿಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಗಿಳಿದು ಮೊಬೈಲ್ ಕರೆ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆರೋಪಿಯೊಬ್ಬ ಬಾಲಕನನ್ನು ಹತ್ಯೆ ಮಾಡಿ, ಕುಂಟೇರಿ ಕೆರೆಯ ಬಯಲಿನ ಹಳ್ಳದಲ್ಲಿ ಶವವನ್ನು ಬಿಸಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.ಸ್ಥಳಕ್ಕೆ ಎಸ್​ಪಿ ಚೇತನ್, ಡಿವೈಎಸ್ ಪಿ ರವಿಪ್ರಸಾದ್, ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ ವೇಳೆ ಬಾಲಕನ ಶವ ಪತ್ತೆಯಾಗಿದೆ.
ಶವವನ್ನು ಮೈಸೂರಿನ ಶವಾಗಾರಕ್ಕೆ ಸಾಗಿಸಲಾಗಿದೆ