ಬಾರ್‌ನಲ್ಲಿ ಬಿಲ್ ಪಾವತಿಗಾಗಿ‌ ಗಲಾಟೆ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಆ.3- ಬಾರ್‌ನಲ್ಲಿ ಬಿಲ್ ಪಾವತಿ ವಿಚಾರಕ್ಕೆ ನಡೆದ ಗಲಾಟೆ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಇಂದಿರಾನಗರದಲ್ಲಿ ನಡೆದಿದೆ.
ಇಂದಿರಾನಗರದ‌ ಅಪ್ಪರೆಡ್ಡಿ ಪಾಳ್ಯದ ಪ್ರಕಾಶ್ (28) ಕೊಲೆಯಾದ ಚಾಲಕ.
ಕೊಲೆ ಮಾಡಿದ ಮಂಜುನಾಥ್ ಎಂಬಾತನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ. ಪ್ರಕಾಶ್ ಮತ್ತು ಆರೋಪಿಗಳು ಪರಿಚಿತರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜು.27ರ ರಾತ್ರಿ 10.30ರಲ್ಲಿ ಪ್ರಕಾಶ್, ತನ್ನ ಸ್ನೇಹಿತರ ಜೊತೆಯಲ್ಲಿ ಇಂದಿರಾನಗರದ ಡಬಲ್ ರಸ್ತೆಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಮದ್ಯ ಸೇವನೆಗೆ ಹೋಗಿದ್ದ. ಇದೆ ವೇಳೆ ಆರೋಪಿಗಳು ಸಹ ಮದ್ಯ ಸೇವನೆ ಮಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಆರೋಪಿಗಳು, ಬಾರ್ ಕ್ಯಾಷಿಯರ್ ಬಳಿ ಬಿಲ್ ಪಾವತಿ ವಿಚಾರಕ್ಕೆ ಜಗಳ ಮಾಡುತ್ತಿದ್ದಾಗ ಪ್ರಕಾಶ್ ಹೋಗಿ ಬಿಲ್ ಕೊಟ್ಟು ಬರುವಂತೆ ಬುದ್ದಿವಾದ ಹೇಳಿ ಅಲ್ಲಿಂದ ಸ್ನೇಹಿತರ ಜತೆಯಲ್ಲಿ ಬೈಕ್‌ನಲ್ಲಿ ಹೊರಟ್ಟು ಬಂದಿದ್ದಾನೆ.
ದೂಪನಹಳ್ಳಿ ಸಮೀಪ ಬೈಕ್‌ನಲ್ಲಿ ಬಂದ ಆರೋಪಿಗಳು, ಪ್ರಕಾಶ್ ಮತ್ತು ಆತನ ಸ್ನೇಹಿತರನ್ನು ತಡೆದು ಜಗಳ ತೆಗೆದಿದ್ದಾರೆ. ಬಾರ್‌ನಲ್ಲಿ ಬಿಲ್ ಕೊಡುವಂತೆ ಬುದ್ಧಿವಾದ ಹೇಳುತ್ತೀಯ ಎಂದು ಹಲ್ಲೆ ನಡೆಸಿ ಜೈಕುಮಾರ್ ಮತ್ತು ಆತನ ಸ್ನೇಹಿತರು ಮಾರಕಾಸ್ತ್ರದಿಂದ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ಬೆಳಗಿನ ಜಾವ ಪ್ರಕಾಶ್ ಮೃತಪಟ್ಟಿದ್ದಾನೆ.
ಸಾವಿಗೀಡಾಗುವ ಮೊದಲು ಪ್ರಕಾಶ್ ಕೊಟ್ಟ ಹೇಳಿಕೆ ಮೇರೆಗೆ ಎಫ್​ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದಿರಾನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.