ಬಾರದ ಮಳೆ: ಸಂಕಷ್ಟದಲ್ಲಿ ರೈತ

ಲಕ್ಷ್ಮೇಶ್ವರ,ಜೂ14 :ರೈತರ ಪಾಲಿಗೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ರೈತರು ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯ ಪೆಟ್ಟಿನಿಂದ ಪಾರಾಗುವುದೇ ಕಠಿಣ.
ಇದಕ್ಕೆ ಉದಾಹರಣೆ ಎಂದರೆ ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಮುಂಗಾರು ಮತ್ತು ಹಿಂಗಾರು ಬೆಳೆಯನ್ನು ಕಳೆದುಕೊಂಡು ರೈತರು ಸಾಲದ ಸುಳಿಯಲ್ಲಿ ಸಿಲುಕಿದರು ಈಗ ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಬಿತ್ತನೆಯ ಹಿನ್ನಡೆಯಿಂದಾಗಿ ಮೋಡಗಳ ಕಣ್ಣು ಮುಚ್ಚಾಲೆ ಆಟದಲ್ಲಿ ರೈತರು ಮುಂದೇನು ಎಂದು ತಲೆಗೆ ಕೈ ಇಟ್ಟು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಆಗಲೇ ಮುಂಗಾರು ಹಂಗಾಮಿನ ಬಿತ್ತನೆಯ ಕಾಲ ಮುಕ್ತಾಯ ಹಂತದಲ್ಲಿದ್ದು ಅದರಲ್ಲೂ ವಿಶೇಷವಾಗಿ ಕೆಂಪು ಮಣ್ಣಿನ ಭೂಮಿಯಲ್ಲಿ ರೈತರು ಇದುವರೆಗೂ ಯಾವುದೇ ಕೆಲಸವನ್ನು ಮಾಡದಂತ ಸ್ಥಿತಿ ಇದೆ ಇನ್ನು ಕಪ್ಪು ಮಣ್ಣಿನ ಭೂಮಿಯಲ್ಲಿ ರೈತರು ಹೊಲಗದ್ದೆಗಳನ್ನು ಹೊರಗಲು ಸಹ ಹೆಣಗಾಡುವ ಸ್ಥಿತಿ ಇದೆ.
ಕೈಕೊಟ್ಟ ಮಳೆಯಿಂದಾಗಿ ರೈತರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಲ್ಲಿ ಮತ್ತೆ ಬರದ ಛಾಯೆ ತಮ್ಮ ಮೇಲೆ ಎರಗುತ್ತದೆಯೋ ಎಂಬ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಈಗಾಗಲೇ ಸಾಲ ಸೂಲ ಮಾಡಿ ಬೀಜ ಗೊಬ್ಬರ ಖರೀದಿಸಿದ್ದು ಮುಗಿಲಿನತ್ತ ನೋಡುತ್ತಿದ್ದಾರೆ.
ಈಗಾಗಲೇ ರೈತರು ಧೈರ್ಯ ಮಾಡಿ ಗೋವಿನ ಜೋಳ ಮತ್ತು ಹೆಸರು ಬಿತ್ತಿದ್ದು ಬಿಸಿಲಿನ ತಾಪಮಾನದಿಂದಾಗಿ ಆ ಬೆಳೆಗಳು ಸಹ ಕೈ ಕೊಡುವ ಸ್ಥಿತಿ ಇದೆ ಅನುಕೂಲವಿರುವ ರೈತರು ಪಂಪ್ಸೆಟ್ಟುಗಳ ಮುಖಾಂತರ ನೀರು ಹರಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನಲ್ಲಿ 31, 070 ಹೆಕ್ಟರ್ ಒಣ ಬೇಸಾಯದ ಭೂಮಿ ಇದ್ದು ಕೇವಲ 4000 ಎಕರೆ ನೀರಾವರಿ ಜಮೀನಿದೆ ಪ್ರತಿಶತ ಐದರಿಂದ ಹತ್ತರಷ್ಟು ಮಾತ್ರ ಬಿತ್ತನೆಯಾಗಿದ್ದು ಇನ್ನುಳಿದಂತೆ ಬಹುತೇಕ ಜಮೀನುಗಳು ಖಾಲಿ ಇವೆ.
ಈ ಕುರಿತು ಸೂರಣಗಿ ಗ್ರಾಮದ ರೈತರದ ಶಂಕರಪ್ಪ ಶೀರನಹಳ್ಳಿ ಅವರು ಪ್ರತಿಕ್ರಿಯೆ ನೀಡಿ ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಮುಂಗಾರಿನ ಬೆಳೆ ತೆಗೆಯುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.