ಬಾರದ ಬಾಕಿ ರೈತರ ಬೆಳೆ ಹಾನಿ ಪರಿಹಾರ: ಆಕ್ರೋಶ

ಆಳಂದ:ಮಾ.26: ಸರ್ಕಾರಕ್ಕೆ ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾದರು ಸಹಿತ ಅರ್ಧದಷ್ಟು ರೈತರ ಖಾತೆಗೆ ಹಣ ಬಾರದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಹಿಂಗಾರು ಹಾಗೂ ಮುಂಗಾರು ಸೇರಿ ಒಟ್ಟು ಅತಿವೃಷ್ಟಿ ಅನಾವೃಷ್ಟಿ ಹೀಗೆ ಬೆಳೆ ಹಾನಿ ಪರಿಹಾರಕ್ಕೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಮೂಲಕ ಜಂಟಿಯಾಗಿ ಹಾನಿಯ ಸರ್ವೆಯೂ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಕೆಯಾದರು ಸಹಿತ ರೈತರ ಖಾತೆಗಳಿಗೆ ಹಣ ಬಾರದೆ ಇರುವುದು ಸರ್ಕಾರವನ್ನು ಎದುರುನೋಡುವಂತೆ ಮಾಡಿದೆ. ತೋಟಗಾರಿಕೆ, ಖುಷ್ಕಿ ನೀರಾವರಿ ವಣ ಬೇಸಾಯದಲ್ಲಿ ತೊಗರಿ, ಸಜ್ಜೆ, ಉದ್ದು, ಹೆಸರು, ಎಳ್ಳು ಹೀಗೆ ಇನ್ನಿತರ ಅನೇಕ ಬೆಳೆ ಹಾಳಾಗಿದೆ. ತೋಟಗಾರಿಕೆಯಲ್ಲಿ ಕಲ್ಲಂಗಡಿ, ಬಾಳೆ, ಹೂವು, ಹಣ್ಣು ಇನ್ನಿತರ ತರಕಾರಿ ಬೆಳೆ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರು ಅರ್ಜಿ ಸಲ್ಲಿಸಿ ತಿಂಗಳುಗಳೆ ಉರುಳುತ್ತಿವೆ. ಆದರೆ ಪೂರ್ಣವಾಗಿ ಹಾನಿಯಾದ ಎಲ್ಲಾ ರೈತರಿಗೆ ಇನ್ನೂ ಪರಿಹಾರದ ಮೊತ್ತವೆ ತಲುಪದೆ ಇರುವುದು ರೈತರು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ.

ಬೆಳೆ ಹಾನಿ ಪರಿಹಾರ ನೀಡುವಂತೆ ವಿರೋಧ ಪಕ್ಷಗಳು ಸೇರಿ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದು, ಸಾಲದಕ್ಕೆ ಹೋರಾಟದ ಮೂಲಕ ಬೇಡಿಕೆಗೆ ಒತ್ತಾಯಿಸಿದ್ದು, ಆದರೆ ಪರಿಹಾರ ಮಾತ್ರ ದೊರಕಿಲ್ಲ.

ಜಿಲ್ಲೆಯಲ್ಲೇ ಅತಿ ಹೆಚ್ಚು ಹಾನಿಯಾದ ತಾಲೂಕಿನ 45969 ಮಂದಿ ರೈತರ ಬೆಳೆ ಹಾನಿಯ ಕುರಿತು ನೋಂದಣಿ ಕೈಗೊಳ್ಳಲಾಗಿದೆ. ಆದರೆ ಇದುವರೆಗೂ ಸರ್ಕಾರದಿಂದ ಸುಮಾರು 30740 ರೈತರಿಗೆ ಮಾತ್ರ ಪರಿಹಾರದ ಮೊತ್ತ ಖಾತೆ ನೀಡಲಾಗಿದೆ. ಇನ್ನೂಳಿದ 15229 ರೈತರು ತಮ್ಮ ಖಾತೆಗೆ ಹಣ ಜಮಾವಾದ ಕುರಿತು ನಿತ್ಯ ಬ್ಯಾಂಕ್‍ಗಳಿಗೆ ಎಡತಾಕಿ ಹಾಕತೊಡಗಿದ್ದಾರೆ, ಹಣ ಬರುತ್ತಿಲ್ಲ.

ಪರಿಹಾರ ನೀಡಿ:

ಅತಿವೃಷ್ಟಿ ಅನಾವೃಷ್ಟಿ ಲಾಕ್‍ಡೌನ್ ಸೇರಿ ಬೆಳೆದ ಬೆಳೆಗೆ ತಕ್ಕ ಬೆಲೆ ಬಾರದೆ ಸಂಕಷ್ಟದಲ್ಲಿರುವ ರೈತರ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿ ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿ ಹಾನಿಯ ಕುರಿತು ನೋಂದಾಯಿಸಿ ಆರು ತಿಂಗಳಾದರು ಸರ್ಕಾರದ ಹಣವನ್ನು ಸಾಕಷ್ಟು ರೈತರಿಗೆ ಬಂದಿಲ್ಲ. ಸರ್ಕಾರ ಈ ಕೂಡಲೇ ಬೆಳೆ ಹಾನಿ ಮೊತ್ತವನ್ನು ರೈತರ ಖಾತೆಗಳಿಗೆ ಜಮಾಕೈಗೊಂಡು ರೈತರಿಗೆ ನೆರವು ಒದಗಿಸಬೇಕು.

ಬಸವರಾಜ ಎಸ್. ಕೊರಳ್ಳಿ

ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ

ಸಿಎಂ ಭರವಸೆ: ತಾಲೂಕಿನಾದ್ಯಂತ ಬೆಳೆಹಾನಿಯಾದ ಮೊತ್ತ ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಹಾನಿಯಾದ ರೈತರ ನೋಂದಣಿಯಾದ ಅರ್ಧದಷ್ಟು ರೈತರಿಗೆ ಈಗಾಗಲೇ ಹಣ ಸಂದಾಯವಾಗಿದೆ. ಇನ್ನೂಳಿದ ಎಲ್ಲ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಸುಭಾಷ ಗುತ್ತೇದಾರ ಶಾಸಕರು ಆಳಂದ.

ಅತಿ ಹೆಚ್ಚು ನೋಂದಣಿ: ಜಿಲ್ಲೆಯಲ್ಲೇ ಆಳಂದ ತಾಲೂಕಿನಿಂದ ಬೆಳೆಹಾನಿಯಾದ 45969 ಮಂದಿ ರೈತರ ನೋಂದಣಿ ಕೈಗೊಂಡಿರುವುದು ಹೆಚ್ಚಾಗಿದ್ದು, ಸರ್ಕಾರದಿಂದ ಬೆಳೆ ಹಾನಿ ಮೊತ್ತ ಈಗಾಗಲೇ 30740 ಮಂದಿ ರೈತರ ಖಾತೆಗೆ ಹಣ ಜಮಾಗೊಂಡಿದೆ. 15229 ಇನ್ನೂಳಿದವರ ಖಾತೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ನಿರೀಕ್ಷೆಯಿದೆ.

ಯಲ್ಲಪ್ಪಾ ಸುಬೇದಾರ ತಹಸೀಲ್ದಾರರು ಆಳಂದ.