ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸೆ.30 ರಂದು ತೀರ್ಪು ಪ್ರಕಟ: ಅಡ್ವಾಣಿ ಸೇರಿ ಇತರರ ಹಾಜರಿಗೆ ಸೂಚನೆ

ನವದೆಹಲಿ, ಸೆ.16- ಉತ್ತರ ಪ್ರದೇಶದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 30ರಂದು ತೀರ್ಪು ಪ್ರಕಟಿಸಲಿದೆ.

28 ವರ್ಷಗಳ ಹಳೆಯ ಪ್ರಕರಣ ಸಂಬಂಧ ಈಗ ನ್ಯಾಯಾಲಯ ನೀಡುತ್ತಿರುವ ತೀರ್ಪಿನತ್ತ ಎಲ್ಲರ ಚಿತ್ತ ಕೇಂದ್ರೀಕೃತವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ,ಸೇರಿದಂತೆ ಪ್ರಕರಣದಲ್ಲಿ ಆರೋಪಿತರಾಗಿರುವ ಎಲ್ಲರೂ ಖುದ್ದು ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ.

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್ .ಕೆ ಯಾದವ್ ಅವರು ತೀರ್ಪು ಪ್ರಕಟಿಸಲಿದ್ದಾರೆ.

ಬಿಜೆಪಿ ಪ್ರಮುಖ ಮೂರು ಮಂದಿ ನಾಯಕರು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ಹೆಸರು ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಸುದೀರ್ಘ ವಿಚಾರಣೆ ನಡೆಸಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಇದೀಗ ಸೆಪ್ಟೆಂಬರ್ 30ರಂದು ತೀರ್ಪು ನೀಡುವುದಾಗಿ ತಿಳಿಸಿದೆ.

1992ರ ಡಿಸೆಂಬರ್ ನಲ್ಲಿ ಕರಸೇವಕರು ಬಾಬ್ರಿ ಮಸೀದಿ ಧ್ವಂಸ ಮಾಡಿದ ಹಿನ್ನೆಲೆಯಲ್ಲಿ ಈ ಮೂರು ಮಂದಿ ಸೇರಿದಂತೆ ಅನೇಕರ ಹೆಸರು ಕೇಳಿಬಂದಿತ್ತು.

ಕಳೆದ ಜುಲೈ 24ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಬಿಐ ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 92 ವರ್ಷ ವಯಸ್ಸಿನ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಹೇಳಿಕೆ ದಾಖಲಿಸಿತ್ತು. ಜೊತೆಗೆ 86 ವರ್ಷದ ಮುರಳಿ ಮನೋಹರ ಜೋಶಿ ಅವರ ಹೇಳಿಕೆಯನ್ನು ಪಡೆಯಲಾಗಿತ್ತು ಇಬ್ಬರ ಮೇಲೆ ದಾಖಲಾಗಿರುವ ಆರೋಪಗಳನ್ನು ಉಭಯ ನಾಯಕರು ನಿರಾಕರಿಸಿದ್ದರು.

ಸೆಪ್ಟೆಂಬರ್ 30ರಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸುವ ತೀರ್ಪು ನಮ್ಮ ಪರ ಬರಲಿದೆ ವಿಶ್ವಾಸವನ್ನು ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಉಮಾಭಾರತಿ ಹೇಳಿದ್ದಾರೆ.
ಪ್ರಕರಣದಲ್ಲಿ ಒಂದು ವೇಳೆ ತಪ್ಪಿತಸ್ಥ ಎಂದು ತೀರ್ಪು ನೀಡಿದರು ಅದನ್ನು ಖುಷಿಯಿಂದ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದಾರೆ

ಅಯೋಧ್ಯೆ ರಾಮ ಜನ್ಮಭೂಮಿ ಬಾಬರಿ ಮಸೀದಿ ವಿವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸುವ ಮೂಲಕ ಶತಮಾನಗಳಷ್ಟು ಹಳೆಯದಾದ ಪ್ರಕರಣವನ್ನು ಇತ್ಯರ್ಥ ಮಾಡಿತ್ತು ಎನ್ನುವುದು ಇಲ್ಲಿ ಸ್ಮರಣೀಯ