ಬಾಬ್ರಿ ಮಸೀದಿ, ಗುಜರಾತ್ ಗಲಭೆ ಪಠ್ಯದಿಂದ ಕೈಬಿಟ್ಟ ಎನ್.ಸಿ.ಈ.ಆರ್.ಟಿ : ಎಐಡಿಎಸ್‍ಓ ಆಕ್ರೋಶ

ಕಲಬುರಗಿ,ಏ.7-ಒಂದಲ್ಲ ಒಂದು ನೀತಿಗಳನ್ನು ಜಾರಿಗೊಳಿಸಿ ಆಡಳಿತಾರೂಢ ಬಿಜೆಪಿಯು ಶಿಕ್ಷಣದ ಮೇಲೆ ಪ್ರಹಾರ ನಡೆಸುತ್ತಲೇ ಇದೆ. ಇದೀಗ ಅಪ್ರಜಾತಾಂತ್ರಿಕವಾಗಿ ಎನ್‍ಸಿಈಆರ್‍ಟಿಯು 12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಿಂದ ಬಾಬ್ರಿ ಮಸೀದಿ, ಹಿಂದುತ್ವ ರಾಜಕೀಯ, ಗುಜರಾತ್ ಗಲಭೆಗಳು ಸೇರಿದಂತೆ ಅನೇಕ ಅಂಶಗಳನ್ನು ತೆಗೆದುಹಾಕಲಾಗಿದೆ. “ಪ್ರಜಾತಾಂತ್ರಿಕ ಹಕ್ಕುಗಳು” ಎಂಬ ಪಾಠದಿಂದ ಗುಜರಾತ್ ಗಲಭೆಗಳ ಅಂಶವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. “ಭಾರತದ ರಾಜಕೀಯದಲ್ಲಿ ಇತ್ತೀಚಿನ ಬೆಳವಣಿಗೆಗಳು” ಎಂಬ ಪಾಠದಿಂದ ಬಾಬ್ರಿ ಮಸೀದಿ ಕುರಿತಾದ ಅಂಶಗಳನ್ನು ಕೈ ಬಿಟ್ಟು, ರಾಮ ಜನ್ಮಭೂಮಿ ಸುತ್ತುವರಿದಂತೆ ಹೆಚ್ಚಿನ ಗಮನ ನೀಡಲಾಗಿದೆ. ಇದಷ್ಟೇ ಅಲ್ಲದೆ ಪಠ್ಯದುದ್ದಕ್ಕೂ ಅಲ್ಪಸಂಖ್ಯಾತ ಸಮುದಾಯದ ಕುರಿತು ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ. ಇತಿಹಾಸ ಮತ್ತು ಸಮಾಜಶಾಸ್ತ್ರ ಪುಸ್ತಕಗಳಲ್ಲೂ ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ. ಕೋಮು ಗಲಭೆಗಳನ್ನು ಬಿಂಬಿಸುವ ಅನೇಕ ಚಿತ್ರಗಳನ್ನು ಕೂಡ ಪಠ್ಯದಿಂದ ಕೈ ಬಿಡಲಾಗಿದೆ. ಈ ನಡೆಯು ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ನವೋದಯ ಚಳುವಳಿಯ ಹರಿಕಾರರು ಎತ್ತಿ ಹಿಡಿದ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಆಕ್ರೋಶ ವ್ಯಕ್ತಪಡಿಸಿದೆ.
ಕೂಡಲೇ ಈ ತಿದ್ದುಪಡಿಗಳನ್ನು ಕೈಬಿಟ್ಟು ವಾಸ್ತವಾಂಶಗಳನ್ನು ಪಠ್ಯಕ್ಕೆ ಮರು ಸೇರ್ಪಡಿಸಬೇಕೆಂದು ಎಐಡಿಎಸ್‍ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಜಿಲ್ಲಾ ಕಾರ್ಯದರ್ಶಿ ತುಳಜಾರಾಮ್ ಎನ್.ಕೆ.ಆಗ್ರಹಿಸಿದ್ದಾರೆ.