ಬಾಬೂಜಿ ಸಾಧನೆ ಸ್ಮರಣೀಯ

ಧಾರವಾಡೆ ಏ6:ಆಸ್ತಿ, ಅಂತಸ್ತು, ಹಣ ಇವುಗಳಿಗಿಂತ ಭಾವನೆ, ರಾಷ್ಟ್ರೀಯತೆ, ಸದ್ಗುಣಗಳು ಡಾ. ಬಾಬು ಜಗಜೀವನರಾಮ ಅವರನ್ನು ಮಹಾ ನಾಯಕನ್ನಾಗಿ ಮಾಡಿದವು ಎಂದು ಬೆಳಗಾವಿ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಚಂದ್ರಕಾಂತ ಲೋಕರೆ ನುಡಿದರು.
ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಡಾ. ಬಾಬು ಜಗಜೀವನರಾಮರವರ 114 ನೇ ಜನ್ಮ ದಿನಾಚರಣೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಏಪ್ರೀಲ್ 5, 1908 ರಲ್ಲಿ ಅರ್ರ ಹತ್ತಿರದ ಚಾಂದ್ವಾ, ಬಿಹಾರದಲ್ಲಿ ಜನಿಸಿದರು. ಅವರು ಪಂಡಿತ ಮದನಮೋಹನ ಮಾಳವೀಯ, ರಾಜೇಂದ್ರ ಪ್ರಸಾದ ಹಾಗೂ ಸುಭಾಸ ಚಂದ್ರ ಬೋಸ, ಮುಂತಾದ ಮಹಾನ ನಾಯಕರಿಂದ ಪ್ರೇರಣೆಗೊಂಡು ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದರು. ಪಂಡಿತ ಜವಾಹರಲಾಲ ನೆಹರುರವರ ಮೊದಲ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿ ಕಾರ್ಮಿಕರ ಸುಧಾರಣೆಗಾಗಿ ಅನೇಕ ಕಾನೂನುಗಳನ್ನು ರೂಪಿಸಿದರು. ನಂತರ ಸಂವಹನ, ರೇಲ್ವೆ, ರಕ್ಷಣೆ ಮತ್ತು ಕೃಷಿ ಮಂತ್ರಿಗಳಾಗಿ ತಮ್ಮ ಅಧೀನದಲ್ಲಿ ಬರುವ ಮಂತ್ರಾಲಯದಲ್ಲಿ ಗಣನೀಯ ಸುಧಾರಣೆಗಳನ್ನು ಜಾರಿಗೊಳಿಸಿದರು ಎಂದರು.
ಅವರು ಕೃಷಿ ಮಂತ್ರಿಗಳಾಗಿದ್ದಾಗ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಸಹಕಾರದಿಂದ ಹಸಿರು ಕ್ರಾಂತಿಯಾಯಿತು. ಅವರು ರಕ್ಷಣಾ ಮಂತ್ರಿಯಾಗಿದ್ದಾಗ 1971ರಲ್ಲಿ ಬಾಂಗ್ಲಾದೇಶ ಸ್ವತಂತ್ರ ದೇಶವಾಗಿ ರಚನೆಯಾಯಿತು ಎಂದು ಡಾ.ಬಾಬು ಜಗಜೀವನರಾಮರವರ ಜನನದಿಂದ ಮರಣದವರೆಗಿನ ಸಾಧನೆಗಳನ್ನು ವಿವರಿಸಿದರು.
ಅಧ್ಯಕ್ಷರಾದ ಕುಲಪತಿ ಡಾ. ಮಹದೇವ ಬ. ಚೆಟ್ಟಿ ಡಾ. ಬಾಬು ಜಗಜೀವನ ರಾಮ ರವರ ಅನೇಕ ಸಾಧನೆಗಳಲ್ಲಿ ಅವರು ಕೃಷಿ ಹಾಗೂ ನೀರಾವರಿ ಸಚಿವರಾಗಿರುವಾಗ ಡಾ. ಸ್ವಾಮಿನಾಥನ ಹಾಗೂ ಡಾ. ಸಿ. ಸುಬ್ರಮನ್ಯಮಂ ಇವರ ಸಹಕಾರರೊಂದಿಗೆ ಹಸಿರು ಕ್ರಾಂತಿಗೆ ಕಾರಣರಾದರೆಂದು ತಿಳಿಸಿದರು. ಇದರ ಜೊತೆಗೆ ರೇಲ್ವೆ ಸಚಿವರಾಗಿ ಹಾಗೂ ಕಾರ್ಮಿಕ ಸಚಿವರಾಗಿ ಗಣನೀಯ ಸುಧಾರಣೆಗಳನ್ನು ಜಾರಿಗೊಳಿಸಿದರು. ಇಂದಿರಾ ಗಾಂಧಿ ದೇಸಾಯಿ ಪ್ರಧಾನಿ ಮಂತ್ರಿಗಳ ಅಡಿಯಲ್ಲಿ ಡಾ. ಬಾಬು ಜಗಜೀವನರಾಮರವರು ರಕ್ಷಣಾ ಸಚಿವರಾಗಿ ಬಾಂಗ್ಲಾದೇಶ ರಾಷ್ಟ್ರದ ಉದಯಕ್ಕೆ ಕಾರಣವಾದರು. ಬನಾರಸ ಹಿಂದೂ ವಿಶ್ವವಿದ್ಯಾಲಯವನ್ನು ಸರ್ಕಾರದ ಎಳ್ಳಷ್ಟು ಧನ ಸಹಾಯವಿಲ್ಲದೆ ಸ್ಥಾಪಿಸಿದ ಪಂಡಿತ ಮದನಮೋಹನ ಮಾಳವೀಯ ಇವರ ಮಾರ್ಗದರ್ಶನಲ್ಲಿ ಡಾ. ಬಾಬು ಜಗಜೀವನರಾಮ ಪ್ರಭಾವಿತರಾಗಿದಲ್ಲಿ ಆಶ್ಚರ್ಯವಿಲ್ಲವೆಂದರು. ಇವರುಗಳ ಬಲಿದಾನದಿಂದ ನೆಟ್ಟ ಫಲದ ಪ್ರತಿಫಲವನ್ನು ಇಂದು ನಾವೆಲ್ಲರೂ ಉಣ್ಣುತ್ತೀದ್ದೇವೆ ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.
ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಪಿ. ಮಲ್ಲೇಶ, ಅಧಿಕಾರಿಗಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪ್ರಾರಂಭದಲ್ಲಿ ಡೀನ್ (ಕೃಷಿ) ಹಾಗೂ ಆವರಣ ಮುಖ್ಯಸ್ಥರಾದ ಡಾ. ಬಿ.ಡಿ.ಬಿರಾದಾರ ಸ್ವಾಗತಿಸಿದರು, ಕುಲಸಚಿವರಾದ ರಮೇಶ ದೇಸಾಯಿ ವಂದನೆಗಳನ್ನು ಸಲ್ಲಿಸಿದರು ಮತ್ತು ಡಾ|| ಸುರೇಖಾ ಸಂಕನಗೌಡರ ಕಾರ್ಯಕ್ರಮ ನಿರೂಪಿಸಿದರು.