ಬಾಬೂಜಿ ಅವರ ಕೊಡುಗೆ ಅಪಾರ : ಡಾ. ಚಂದ್ರಶೇಖರ್


ಸಂಜೆವಾಣಿ ವಾರ್ತೆ
ಬಳ್ಳಾರಿ,ಜು,26- ದಲಿತರ ಕುರಿತು ತೀವ್ರ ಸಹಾನುಭೂತಿ ಹೊಂದಿದ್ದ ಡಾ. ಬಾಬು ಜಗಜೀವನ್ ರಾಮ್ ಜ್ಞಾನ ಮತ್ತು ವ್ಯಾಪಕ ದೃಷ್ಟಿಯಿಂದ ತಮ್ಮ ಬದುಕಿನ ಉದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ರಾಷ್ಟ್ರೀಯ ಕಾನೂನು ಶಾಲೆ ಬೆಂಗಳೂರಿನ ತಳ ಸಮುದಾಯದ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ್ ಆರ್ ವಿ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಜಾದಿ ಕಿ ಅಮೃತ್ ಮಹೋತ್ಸವ 2022 ಮತ್ತು ಡಾ. ಬಾಬೂ ಜಗಜೀವನ್ ರಾಮ್ ಅವರ ಪುಣ್ಯ ಸ್ಮರಣೆ ನಿಮಿತ್ತ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅದೇ ರೀತಿಯಾಗಿ ಸಮಾಜದಲ್ಲಿ ಶೋಷಿತ ಸಮುದಾಯವು ಸಂವಿಧಾನಬದ್ದವಾದ ಹಕ್ಕುಗಳನ್ನು ಪಡೆಯುವಲ್ಲಿ  ಡಾ. ಬಾಬೂ ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಉದ್ದೇಶವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಡಾ. ಬಾಬೂ ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿ ಚಿತ್ತಣ್ಣ ಜಿ ಡಿ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವಲ್ಲಿ ಡಾ. ಬಾಬೂ ಜಗಜೀವನ ರಾಮ್ ಅವರ ಪಾತ್ರ ಮಹತ್ವದಾಗಿದೆ. ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಬಾಬೂಜಿ ತಮ್ಮ ಛಾಪನ್ನು ಮೂಡಿಸಿದ್ದರು.
ಬಾಬೂಜಿಯವರು ಹಲವಾರು ಖಾತೆಗಳ ಸಚಿವ ಸ್ಥಾನಗಳನ್ನು ನಿರ್ವಹಿಸಿದ್ದರು. ಎಲ್ಲ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಹೊಸ-ಹೊಸ ಕಾಯ್ದೆಗಳನ್ನು ಜಾರಿಗೆ ತಂದರು. ಅಲ್ಲದೆ ಡಾ. ಬಾಬು ಜಗಜೀವನ್ ರಾಮ 35 ವರ್ಷಗಳ ದೀರ್ಘಕಾಲದ ಸೇವೆ ಸಲ್ಲಿಸಿದ ಕ್ಯಾಬಿನೆಟ್ ಮಂತ್ರಿಯಾಗಿದ್ದರು ಎಂಬ ಹೆಗ್ಗಳಿಕೆ ಅವರದ್ದಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಕುಲಪತಿಯಾದ ಪ್ರೊ. ಸಿದ್ದು ಪಿ. ಆಲಗೂರ ಮಾತನಾಡಿ, ಡಾ. ಬಾಬೂ ಜಗಜೀವನ್ ರಾಮ್ ಅವರ ವಿಚಾರಗಳು ಅವಿಸ್ಮರಣೀಯ. ಡಾ. ಬಾಬೂ ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ವಿಶ್ವವಿದ್ಯಾಲಯವು ಆರ್ಥಿಕ ಸಹಾಯ ಮತ್ತು ಇನ್ನಿತರೆ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದರು. ಹಾಗೂ ಮುಂಬರುವ ದಿನಗಳಲ್ಲಿ ತಳ ಸಮುದಾಯದ ಅಭಿವೃದ್ದಿಗೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಹೆಚ್. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಬೂಜಿಯವರು ದಲಿತ ಸಮುದಾಯ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಯ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್, ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ ಓಲೇಕಾರ, ವಿತ್ತಾಧಿಕಾರಿಗಳಾದ ಡಾ. ಕೆ ಸಿ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಸಂತೋಷಕುಮಾರ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಾ. ಶಿವಪ್ರಕಾಶ ನಿರೂಪಿಸಿದರು. ಡಾ. ಕುಮಾರ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.