ಬಾಬೂಜಿಯವರ ಜೀವನ ಮೌಲ್ಯಗಳು ಯುವಕರಿಗೆ ಪ್ರೇರಣೆ: ಪ್ರೊ. ರಾಜನಾಳ್ಕರ್ ಲಕ್ಷ್ಮಣ

ಕಲಬುರಗಿ:ನ.02: ದೇಶ ಕಂಡಂತಹ ಮಹಾನ್ ಸಮಾಜಮುಖಿ ಚಿಂತಕರಲ್ಲಿ ಡಾ. ಬಾಬು ಜಗಜೀವನರಾಮ್ ಒಬ್ಬರಾಗಿದ್ದಾರೆ. ರಾಜಕೀಯವಾಗಿ ಹಲವು ಹುದ್ದೆಗಳನ್ನು ಅನುಭವಿಸದರು ಸಹ ಸಮಾಜದ ಹಲವಾರು ತಲ್ಲಣಗಳಿಗೆ ಮತ್ತು ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇಂತಹ ಜನಪರ ಚಿಂತಕರ ವಿಚಾರ ಮತ್ತು ಜೀವನ ಮೌಲ್ಯಗಳು ಯುವಜನಾಂಗಕ್ಕೆ ಪ್ರೇರಣೆಯಾಗಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆಯು ದೃಶ್ಯಕಲಾ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ ‘ಬಾಬೂಜಿ ಅವರ ಸಂದೇಶಾಧರಿತ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ’ ವನ್ನು ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸಾಂಕೇತಿಕವಾಗಿ ಅತಿಥಿ ಗಣ್ಯರಿಂದ ಚಿತ್ರಬಿಡಿಸುವ ಮೂಲಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಾಬು ಜಗಜೀವನರಾಮ್ ಅವರ ಅಧ್ಯಯನ ಪೀಠವು ಇಂದಿನಿಂದ ಹಮ್ಮಿಕೊಂಡಿರುವ ನಾಲ್ಕು ದಿನಗಳ ಶಿಬಿರದಲ್ಲಿ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಸೃಜನಶೀಲ ಮನಸ್ಸಿನ ಚಿತ್ರ ಕಲಾವಿದರು ಭಾಗವಹಿಸಿರುವುದು ನಿಜಕ್ಕೂ ಶ್ಲಾಘನೀಯ. ಬಾಬೂಜಿಯವರ ಚಿಂತನೆಗಳು ಮತ್ತು ತತ್ವಗಳು ದೃಶ್ಯಕಲಾಭಿವ್ಯಕ್ತಿ ಮೂಲಕ ಜನತೆಗೆ ಬಿತ್ತರಗೊಳ್ಳಲಿ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ತತ್ವಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿನ ನೊಂದವರ ಬದುಕನ್ನು ಸುಧಾರಿಸಿದ್ದಾರೆ. ಸಮಾಜದ ಬದಲಾವಣೆಗೆ ಶಕ್ತಿ ಚೈತನ್ಯ ತುಂಬಿರುವ ಇವರ ಸಾಧನೆಗಳನ್ನು ಅಧ್ಯಯನ ಪೀಠಗಳು ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ಅಧ್ಯಯನ ಮತ್ತು ಸಂಶೋಧನೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ. ಬಿ. ದಳಪತಿ ಮುಖ್ಯ ಅತಿಥಿಯಾಗಿ ಮಾತನಾಡಿ ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಸ್ಕøತಿ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೆಳದವರು. ವೇದ ಮತ್ತು ಸಂಸ್ಕøತ ಅಭ್ಯಾಸ ಮಾಡಿ ದೇಶ ಸೇವೆಗೆ ತೊಡಗಿಸಿಕೊಂಡರು. ಸ್ವಾತಂತ್ರ ಹೋರಾಟದ ಜೊತೆಗೆ ಸಮಾಜದ ಪರಿವರ್ತನೆಗೆ ನಿರಂತರ ಪ್ರೇರಕ ಶಕ್ತಿಯಾಗಿದ್ದರು. ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿ ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿದ್ದಾರೆ ಎಂದರು.
ಜಗಜೀವನ ರಾಮ್ ಅಸ್ಪ್ರಶ್ಯತೆ ನಿವಾರಣೆ ಮತ್ತು ಕಾರ್ಮಿಕರು ಮತ್ತು ಮಹಿಳೆಯರ ಜೀವನ ಸುಧಾರಣೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವುದೇ ಅವರ ಜನಮುಖಿ ಕಾರ್ಯಗಳಿಗೆ ಸಾಕ್ಷಿಯಾಗಿವೆ. ಇಂತಹ ಸಮಾನ ಮನಸ್ಸಿನ ಬಾಬೂಜಿಯವರನ್ನು ಜಾತಿಗೆ ಸೀಮಿತ ಮಾಡದೆ ಚರಿತ್ರೆಯ ಮೇಲೆ ಬೆಳಕು ಚೆಲ್ಲಬೇಕಿದೆ. ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಅವರ ವ್ಯಕ್ತಿತ್ವ ಮತ್ತು ವೈಚಾರಿಕ ಚಿಂತನೆಗಳು ಸಮಾಜದಲ್ಲಿನ ಬದಲಾವಣೆಗೆ ಪ್ರಸ್ತುತವೆನಿಸಿದೆ. ಈ ಹಿನ್ನೆಲೆಯಲ್ಲಿ ಬಾಬೂಜಿ ಅವರ ವ್ಯಕ್ತಿತ್ವ, ಜೀವನ ಮೌಲ್ಯ ಮತ್ತು ಸಾಧನೆಗಳು ಸಮಾಜಕ್ಕೆ ತಲುಪಲು ಹೆಚ್ಚು ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡಿದರೆ ಮಾತ್ರ ಸಾಧ್ಯವಿದೆ. ದೇಶದ ಕಟ್ಟಕಡೆಯ ವ್ಯಕ್ತಿಯ ಬದುಕಿನ ಸುಧಾರಣೆಗೆ ಶಕ್ತಿಯಾಗಿದ್ದ ಬಾಬೂಜಿ ಅವರ ಐವತ್ತು ವರ್ಷಗಳ ಜೀವನದಲ್ಲಿ ಆಡಳಿತದ ಮೂಲಕ ಕೃಷಿ, ಕಾನೂನು, ಉದ್ಯಮ, ರಕ್ಷಣೆ, ಕಾರ್ಮಿಕರ ಬದುಕಿಗೆ ಸ್ಪಂದಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ. ವಿಜಯಕುಮಾರ್, ದೃಶ್ಯಕಲಾ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಅಬ್ದುಲ್ ರಬ್ ಉಸ್ತಾದ್, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಮ್. ಬೈರಪ್ಪ, ಚಿತ್ರಕಲಾ ಶಿಬಿರದ ಸಂಚಾಲಕ ಡಾ. ಪಿ. ಪರಶುರಾಮ ಉಪಸ್ಥಿತರಿದ್ದರು. ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ಬಸವರಾಜು ಎಲ್ ಜಾಣೆ, ಸತೀಶ್ ಅಪಚಂದ, ರಂಗಕರ್ಮಿ ಶಂಕ್ರಯ್ಯ ಘಂಟಿ, ಎಚ್ ಎಸ್ ಬಸವಪ್ರಭು, ಡಾ. ಮಲ್ಲಿಕಾರ್ಜುನ ಸಾವರ್ಕರ್, ಡಾ. ಕೆ. ಎಂ. ಕುಮಾರಸ್ವಾಮಿ, ಡಾ. ಶರಣಪ್ಪ ಮಾಳಗಿ, ದಾನಯ್ಯ ಚೌತಿಮಠ ಹಾಗೂ ದೃಶ್ಯಕಲಾ ವಿಭಾಗದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.
ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆ ನಿರ್ದೇಶಕ ಡಾ. ಕೆ. ಲಿಂಗಪ್ಪ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೃಶ್ಯಕಲಾ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ರೆಹಮನ್ ಪಟೇಲ್ ವಂದಿಸಿದರು. ಸಂಗೀತ ವಿಭಾಗದ ಉಪನ್ಯಾಸಕಿ ಡಾ. ಜಯಾ ದಾನಮ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಚಿತ್ರಕಲಾ ಶಿಬಿರದಲ್ಲಿ ಪ್ರಭು ಹರಸೂರ (ತುಮಕೂರು) ರಾಜು ತೆರದಾಳ (ಕೊಪ್ಪಳ) ಅಶೋಕ ಹಿರೇಮಠ (ಬೀದರ), ಎಚ್. ಬಾಬುರಾವ್ (ಕಲಬುರಗಿ), ಕಾಶಿನಾಥ ವಿ. ಕಾಳೆ (ಬಳ್ಳಾರಿ), ಡಾ. ಮಲ್ಲಿಕಾರ್ಜುನ ಎಸ್ ಬಾಗೋಡಿ (ಕಲಬುರಗಿ), ಶಿವಾನಂದ ಬಸವಂತಪ್ಪ (ರಾಯಚೂರು), ಬಸವರಾಜ ಕಮಾಜಿ (ಕಲಬುರಗಿ) ರಂಗನಾಥ ಡಿ. ಕೆ. (ಬಾಗಲಕೋಟೆ), ಅಮೀತ ಕುಮಾರ್ (ವಿಜಯಪುರ) ಸೇರಿದಂತೆ ರಾಜ್ಯ ಮಟ್ಟದ ಚಿತ್ರ ಕಲಾವಿದರು ಬಾಗವಹಿಸಿದ್ದರು.