ಬೀದರ್ ಏ. 6:ಡಾ. ಬಾಬು ಜಗಜೀವನರಾಮ ಅವರು ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿ ಅನೇಕ ಸಾಮಾಜಿಕ ಕ್ರಾಂತಿಗಳನ್ನು ಮಾಡಿ ಹೆಸರುವಾಸಿಗಳಾಗಿದ್ದರು. ಬಾಬೂಜಿ ಎಂದೇ ಖ್ಯಾತರಾದ ಜಗಜೀವನರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ ಸಮಾಜ ಸೇವಕರೂ ಆಗಿದ್ದರು. ವಿಶೇಷವಾಗಿ ಅಸ್ಪ್ರ್ಯಶ್ಯತೆ ನಿವಾರಣೆ ಹೋರಾಟದಲ್ಲಿ ಮುಂಚುಣಿಗಳಾಗಿದ್ದರು ಎಂದು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ನುಡಿದರು.
ಅವರು ಕರಾಶಿ ಸಂಸ್ಥೆಯ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏಪ್ರಿಲ್ 5 ರಂದು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಡಾ. ಬಾಬು ಜಗಜೀವನರಾಮ್ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ ಮಹಾನ ನಾಯಕರಾಗಿದ್ದಾರೆ.
ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು ಹಾಗೂ ಆಹಾರ ಉತ್ಪಾದನೆ ಹೆಚ್ಚಿಸಿದರು. ತಮ್ಮ ಪರಿಶ್ರಮದಿಂದ ಭಾರತ ದೇಶದ ಉಪ ಪ್ರಧಾನಿಯೂ ಆಗಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾ„ಕಾರಿ ಪ್ರೋ. ಶ್ರೀಕಾಂತ ದೊಡ್ಡಮನಿ, ಸಂಖ್ಯಾಶಾಸ್ತ್ರದ ಮುಖ್ಯಸ್ಥರಾದ ಪ್ರೋ. ಡಿ. ಬಿ. ಕಂಬಾರ, ಸಹಾಯಕ ಪ್ರಾಧ್ಯಾಪಕರಾದ ಅಶೋಕ ಹುಡೇದ್, ಶಿವಲೀಲಾ ಪಾಟೀಲ, ಅನಿತಾ ಮಾರ್ಗೆ, ಡಾ. ಬಿ.ವ್ಹಿ. ರವಿಚಂದ್ರ, ಜಗದೀಶ ಬೋರಾಳೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.