ಬಾಬುರೋಡ್ ಶೋ ಮುನ್ನ ಈ‌ ಭಾಗದ ಸಮಸ್ಯೆಗಳ ಬಗ್ಗೆ ಮೋದಿ ಉತ್ತರಿಸಲಿ: ಶಾಸಕ ಪ್ರಿಯಾಂಕ್

ಕಲಬುರಗಿ,ಮೇ 1:ಕಲ್ಯಾಣ ಕರ್ನಾಟಕ ಅಥವಾ ಕಲಬುರಗಿ ಜಿಲ್ಲೆಯಲ್ಲಿ ಆರ್ಟಿಕಲ್ 371 J ಪ್ರಕಾರ ಖಾಲಿ ಹುದ್ದೆಗಳನ್ನು ತುಂಬಲು ಸರ್ಕಾರ ವಿಫಲವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಶ್ರೀಧರ ಬಾಬು ಟೀಕಿಸಿದರು.

ಕಲಬುರಗಿ ಯ ಜಿಲ್ಲಾ ಕಾಂಗ್ರೆಸ ಕಚೇರಿಯಲ್ಲಿ ನಡೆದ ಸುದ್ದಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಕೆ ಆರ್ ಡಿಬಿಯ ಅನುದಾನ ದುರ್ಬಳಕೆ ಆಗಿದೆ ಎಂದು ಆರೋಪಿಸಿದ ಅವರು ಮಂಡಳಿಗೆ ನೀಡಿದ ಅನುದಾನ ಬಳಕೆ ಮಾಡಿಕೊಂಡು‌ ಅಭಿವೃದ್ದಿ ಮಾಡಬೇಕಿತ್ತು. ಆದರೆ, ಮಂಡಳಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ವಿಫಲವಾಗಿದ್ದಾರೆ ಎಂದು ದೂರಿದರು.

ಪ್ರತಿ ವರ್ಷ ಎರಡು ಕೋಟಿ ಹುದ್ದೆ ತುಂಬುವುದಾಗಿ ಮೋದಿ ಭರವಸೆ ನೀಡಿದ್ದರು. ಇದುವರೆಗೆ 16 ಕೋಟಿ ಹುದ್ದೆ ತುಂಬಬೇಕಿತ್ತು ಆದರೆ ಎಲ್ಲಿ ತುಂಬಿದ್ದಾರೆ? ಅವರ ಭರವಸೆ ಏನಾಯ್ತು ? ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಟೆ ರೋಗದಿಂದ ರೈತರು ಸಮಸ್ಯೆ ಎದುರಿಸಿದ್ದಾರೆ. ಈ ಮುಂಚೆ ಮೋದಿ ನೀಡಿದ‌ ಭರವಸೆಯಂತೆ ಕೋಲಿ ಹಾಗೂ ಕುರುಬ ಸಮುದಾಯಕ್ಕೆ ಎಸ್ ಟಿ ಸೇರಿಸುವ ವಿಚಾರ ಏನಾಯ್ತು? ಪ್ರಧಾನಿ ಕಲಬುರಗಿಗೆ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರಂತೆ ಅವರಿಗೆ ಸ್ವಾಗತ. ಅವರು ಇಲ್ಲಿಗೆ ಬರುವ ಮುನ್ನ ಈ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಲಿ ಎಂದು ಒತ್ತಾಯಿಸಿದರು.

ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಉತ್ತರಿಸದ ಮೋದಿ ತಮ್ಮ ಬಗ್ಗೆ 91 ಸಲ ಟೀಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ಜನರ ಸಿಂಪಥಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಡ್ರಾ ಅವರು ಕಲಬುರಗಿಗೆ ಮೇ 3 ರಂದು ಬರುತ್ತಿದ್ದಾರೆ. ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಶ್ರೀಧರ ಬಾಬು ಹೇಳಿದರು.

ಬಿಜೆಪಿ ಅಭ್ಯರ್ಥಿಯ ಮೇಲೆ ಆರು ಜಿಲ್ಲೆ ಹಾಗೂ ಮೂರು ರಾಜ್ಯಗಳಲ್ಲಿ ಬೇರೆ ಬೇರೆ ಅಪರಾಧಗಳ ಕುರಿತಂತೆ ಒಟ್ಟು 41 ಕೇಸುಗಳು ದಾಖಲಾಗಿವೆ. ಇಂತಹ ಅಭ್ಯರ್ಥಿ ಗೆ ಬಿಜೆಪಿ ಟಿಕೇಟು ನೀಡಿದೆ ಎಂದರೆ, ಅವನ ಎಲ್ಲ ಅಕ್ರಮಗಳಿಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ ಎಂದಂತಲ್ಲವೇ? ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಕಾಂಗ್ರೆಸ್ ಪಕ್ಷ ಹಾಗೂ ಪ್ರಿಯಾಂಕ್ ಖರ್ಗೆಯನ್ನು ಟೀಕಿಸುವ ಎನ್ ರವಿಕುಮಾರ ಅವರು ಖುದ್ದಾಗಿ‌ ಚಿತ್ತಾಪುರ ಅಭ್ಯರ್ಥಿ ಯಾಗಿದ್ದಾರೆ ಎಂದು ಕಟಕಿಯಾಡಿದ ಅವರು, ಸಾಮಾಜಿಕ ಶಾಂತಿ ಭಂಗ, ಡಿಸೇಲ್ ಅಕ್ರಮ ಸಂಗ್ರಹಣೆ, ಅನ್ನಭಾಗ್ಯದ ಅಕ್ಕಿ ಕ್ಷೀರಭಾಗ್ಯದ ಹಾಲಿನ ಪುಡಿ ಅಕ್ರಮ‌ ಸಾಗಣೆ ಮಾಡುವ ವ್ಯಕ್ತಿಗೆ ಟಿಕೇಟ್ ನೀಡಿದ್ದೀರಲ್ಲ ರವಿಕುಮಾರ ಅವರೇ ಜಿಲ್ಲೆಯ ರಾಜಕೀಯವನ್ನ ಯಾವ ಮಟ್ಟಕ್ಕೆ ಇಳಿಸಿದ್ದೀರಾ ? ಎಂದರು.

ಇಂತಹ ಅಭ್ಯರ್ಥಿ ಪರ ಮತಯಾಚನೆಗೆ ನಿನ್ನೆ ಉತ್ತರಪ್ರದೇಶ ಸಿಎಂ ಯೋಗಿ ಬಂದಿದ್ದರು. ಮಣಿಕಂಠನ ಕೀರ್ತಿ ಬರೀ‌ ಮೂರು ರಾಜ್ಯದಲ್ಲಿ ಮಾತ್ರ ಇದೆ ನಮ್ಮಕಡೆಗೂ ಬನ್ನಿ ಎಂದು ಹೇಳಿ ಹೋಗಿದ್ದಾರೆಯೇ? ಎಂದು ವ್ಯಂಗ್ಯವಾಡಿದರು.

ಅರವಿಂದ್ ಚವ್ಹಾಣ್ ಹಾಗೂ ದೊಡ್ಡಪ್ಪಗೌಡ ಪಾಟೀಲ ನರಬೋಳ ಅವರಿಗೆ ಟಿಕೇಟ್ ತಪ್ಪಿಸಿರುವುದಕ್ಕೆ ಬಿಜೆಪಿ ಟಿಕೇಟುಗಳನ್ನು ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ರವಿಕುಮಾರ ಅವರ ಮೇಲೆ ಬಂದಿದೆ. ಈ ಆರೋಪ ಮಾಡಿದ್ದು ಸ್ವತಃ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು.‌ಇದಕ್ಕೆ ಏನು ಹೇಳುತ್ತೀರಾ? ಎಂದು ಪ್ರಶ್ನಿಸಿದರು.

ಕೋಲಿ ಹಾಗೂ ಕುರುಬ ಸಮಾಜವನ್ನು ಎಸ್ ಟಿ ಸೇರಿಸುವ ಸಲುವಾಗಿ ಕೇಂದ್ರ ಸಚಿವ ಮುಂಡಾ ಅವರನ್ನು ಭೇಟಿಯಾಗಿ ಬಂದಿದ್ದೇನೆ. ಈ‌ ವಿಚಾರದಲ್ಲಿ ಸ್ವತಃ ಮುಂಡಾ ಅವರೇ ನನಗೆ ಪತ್ರ ಬರೆದು ಕೇಂದ್ರ ಈ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿರುವ ಕುರಿತು ಅವರೇ ಪ್ರಸ್ತಾಪ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ? ಕೋಲಿ ಸಮುದಾಯಕ್ಕೆ ಏನು ಅನುಕೂಲ ಮಾಡಿದ್ದೀರಾ?

ಮೋದಿಗೆ ಆರು ಪ್ರಶ್ನೆಗಳು.

ಅತೀವೃಷ್ಠಿ, ಅನಾವೃಷ್ಠಿ, ಕೋರಾನಾ, ನೆಟೆರೋಗ ಬಂದಾಗ ಬರದ ಮೋದಿಗೆ ನಮ್ಮ ಪ್ರಶ್ನೆಗಳಿವೆ ಅವುಗಳಿಗೆ ಉತ್ತರಿಸಲಿ.

೧) ಕೋಲಿ ಕುರುಬ ಸಮುದಾಯಕ್ಕೆ ಯಾವಾಗ ಎಸ್ ಟಿ ಗೆ ಸೇರಿಸುತ್ತೀರಾ ?

೨) 40% ಕಮಿಷನ್ ಕುರಿತಂತೆ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಈ ಸಲನಾದರೂ ಮಾತನಾಡುತ್ತೀರಾ?

೩) ಇತ್ತೀಚಿಗೆ ಕಲಬುರಗಿ ಜಿಲ್ಲೆಗೆ ಬಂದಾಗ ಬಂಜಾರ ಸಮುದಾಯದ ನಿಮ್ಮ ಮಗ ದಿಲ್ಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದೀರಿ ಇಂದು ‌ಮೀಸಲಾತಿ ವಿಚಾರದಲ್ಲಿ ಬಂಜಾರ ಸಮುದಾಯಕ್ಕೆ ಗೊಂದಲವಾಗಿದೆ. ಈ ಬಗ್ಗೆ ನಿಮ್ಮ ನಿರ್ಧಾರ ಏನು?

೪) ನಿಮ್ಝ್, ಪ್ರತ್ಯೇಕ ರೇಲ್ವೆ ವಲಯ ಮಂಜೂರಾಗಿದ್ದರೂ ವಾಪಸ್ ಹೋಗಿವೆ ಮತ್ತೆ ಈ ಯೋಜನೆಗಳನ್ನು ವಾಪಸ್ ತರುತ್ತೀರಾ?

೫) ಅಕ್ರಮ‌ ಅಕ್ಕಿ ಹಾಗೂ ಹಾಲಿನ ಪುಡಿ ಕಳ್ಳತನ ಮಾಡುವ ವ್ಯಕ್ತಿಗೆ ಟಿಕೇಟು ಕೊಟ್ಟಿದ್ದೀರಾ ಇದಕ್ಕೆ ನಿಮ್ಮ ಸಮರ್ಥನೆ ಏನಿದೆ?

ಮೋದಿಯವರಿಗೆ ಖರ್ಗೆ ವಿಷ ಸರ್ಪ ಎಂದ ವಿಚಾರ ಕುರಿತಂತೆ ಕೇಳಿದಾಗ, ಖರ್ಗೆ‌ ಸಾಹೇಬರು ಈಗಾಗಲೇ ಹೇಳಿದ್ದಾರೆ ಮೋದಿ ಅವರ ವಿಚಾರಗಳು ವಿಷಕಾರಿಗಳಾಗಿವೆ‌ ಎಂದರು.

ಪ್ರಿಯಾಂಕ್ ಖರ್ಗೆ ಠೇವಣಿ‌ ಕಳೆದುಕೊಳ್ಳುವಂತೆ ಸೋಲಿಸಿ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಖರ್ಗೆ ದುರಂತ ಎಂದರೆ ಅತ್ಯಾಚಾರ,ಕಳ್ಳತನ, ನಿರುದ್ಯೋಗದಲ್ಲಿ ನಂಬರ್ ಒನ್ ಇರುವ ಉತ್ತರಪ್ರದೇಶದ ಸಿಎಂ ಅವರಿಂದ ಕನ್ನಡಿಗರು ಯಾವ ಪಾಠ ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದರು.

ಅಜಯ್ ಸಿಂಗ್, ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ ಸೇರಿದಂತೆ ಮತ್ತಿತರಿದ್ದರು.