ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಅಪರೂಪದ ವಿಶೇಷ ಶಸ್ತ್ರಚಿಕಿತ್ಸೆ 

ದಾವಣಗೆರೆ.ಜು.೨೧: ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಅತ್ಯಪರೂಪದ ಒಂದು ವಿಶೇಷ ಶಸ್ತ್ರ ಚಿಕಿತ್ಸೆಯನ್ನು ವೀರಣ್ಣ ಎಂಬ ಶಿಶುವಿಗೆ ಕೈಗೊಂಡಿದ್ದು, ಯಶಸ್ವಿಯಾಗಿದ್ದು, ಮಗು ಆರೋಗ್ಯವಾಗಿದ್ದಾರೆ ಎಂದು ಬಾಪೂಜಿ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಮೂಗನ ಗೌಡ ಅವರು ತಿಳಿಸಿದರು. ಬಾಪೂಜಿ ಸಿಹೆಚ್ಐ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರವನ್ನು ಮಾಧ್ಯಮದವರೊಂದಿಗೆ ಸಂತಸದಿಂದ ಹಂಚಿಕೊಂಡರು.ಕಕ್ಕರಗೊಳ್ಳ ಗ್ರಾಮದ ವೀರಬಸಪ್ಪ ಹಾಗೂ ನೇತ್ರ ದಂಪತಿಗಳು ಮಗುವಾದ ವೀರಣ್ಣನಿಗೆ , ಹುಟ್ಟಿದಾಗಲೇ ಅವನ ಅನ್ನನಾಳವು ಅಭಿವೃದ್ಧಿಯಾಗಿರಲಿಲ್ಲ. ಹಾಲಿರಲಿ, ಎಂಜಲನ್ನು ಸಹ ನುಂಗಲು ಆಗುತ್ತಿರಲಿಲ್ಲ. ನಂತರ ಆತನನ್ನು.  ಹೊಸಪೇಟೆಯಲ್ಲಿ ಜೀವ ಉಳಿಸುವ ಪ್ರಥಮ ಪ್ರಕ್ರಿಯೆಗೆ ಒಳಪಡಿಸಿದ್ದು,  ಆಗ ಅನ್ನನಾಳವನ್ನು ಕುತ್ತಿಗೆಯ ಭಾಗದಲ್ಲಿ ಇರಿಸಲಾಗಿತ್ತು. ಅವನ ಲಾಲಾರಸವು ಕುತ್ತಿಗೆಯಿಂದ ಹೊರಬರುತ್ತಿತ್ತು ಮತ್ತು ಹೊಟ್ಟೆಗೆ ಹಾಕಿದ ಟ್ಯೂಬ್ ಮೂಲಕ ಆಹಾರವನ್ನು ನೀಡಲಾಗುತ್ತಿತ್ತು . ಒಂದು ವರ್ಷದವನಿದ್ದಾಗ ಅವನನ್ನು ಹೊಸಪೇಟೆಯ ವೈದ್ಯರ ಸಲಹೆಯಿಂದ ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಗೆ ಕರೆತರಲಾಗಿತ್ತು.ಮಗುವನ್ನು ಪರಿಶೀಲಿಸಿ, ಮಗು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಮಾಡಬೇಕಾದರೆ ಮಗು ಕನಿಷ್ಠ 10 ಕೆಜಿ ತೂಕವಾದರೂ ಆಗಬೇಕು.  ಮತ್ತು ಹೊಟ್ಟೆಯ ಗಾತ್ರ ದೊಡ್ಡದಾದ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಸಲಹೆ ನೀಡಿದ್ದಾಗಿ ಹೇಳಿದರು.ಡಾ. ಹರ್ಷ ಮಾತನಾಡಿ, 3 ವರ್ಷಗಳ ಕಾಲ ಅವನಿಗೆ ಟ್ಯೂಬ್ ಮೂಲಕ ಸ್ವಲ್ಪ ಸ್ವಲ್ಪ ಹಾಲನ್ನು ಮಾತ್ರ ನೀಡಲಾಗುತ್ತಿತ್ತು . ತಾಯಿ ಬೇರೆ ಆಹಾರವನ್ನು ಮಗುವಿಗೆ ನೀಡಲು ಹೆದರುತ್ತಿದ್ದರು ಮತ್ತು ಸಾಕಷ್ಟು ಆಹಾರವನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ . ಅವನು ದೊಡ್ಡ ಶಸ್ತ್ರ ಚಿಕಿತ್ಸೆಯನ್ನು ತಡೆದುಕೊಳ್ಳುವಷ್ಟು ತೂಕವನ್ನು ಪಡೆದಿರಲಿಲ್ಲ . ಅವನನ್ನು 2 ತಿಂಗಳ ಕಾಲ ಎಸ್.ಎಸ್ ಕೇರ್ ಟ್ರಸ್ಟ್ ಅಡಿಯಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆಗೆ ಸೇರಿಸಲಾಯಿತು. ಮತ್ತು ತೂಕವನ್ನು 10 ಕೆಜಿಗೆ ಹೆಚ್ಚಿಸಲಾಯಿತು ಎಂದರು.ಮಗು ಸ್ವಲ್ಪ ಬಲವಾದ ನಂತರ ಜೂನ್.29 ರಂದು 6 ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗೆ ಒಳಪಡಿಸಿದ್ದು, ಹಿಂದಿನ ಶಸ್ತ್ರಚಿಕಿತ್ಸೆಯನ್ನು ಬದಲಾಯಿಸಿ ಅನ್ನನಾಳದ ಅವಶೇಷವನ್ನು ಹೊರತೆಗೆದು, ಹೊಟ್ಟೆಯನ್ನು ಉದ್ದಗೊಳಿಸಲಾಯಿತು ಮತ್ತು ಟ್ಯೂಬಲರೈಸ್ ಮಾಡಲಾಯಿತು ಎಂದು ಮಾಹಿತಿ ನೀಡಿದರು.ಹೃದಯ ಮತ್ತು ಶ್ವಾಸಕೋಶದ ಹಿಂದೆ ಎದೆಯ ಮೂಲಕ ತಂದು ಕುತ್ತಿಗೆಯಲ್ಲಿ ಅನ್ನನಾಳಕ್ಕೆ ಹೊಲಿಗೆ ಹಾಕಲಾಯಿತು . ಆ ಮಗುವನ್ನು 48 ಗಂಟೆಗಳ ಕಾಲ ಐಸಿಯುನಲ್ಲಿ ವೆಂಟಿಲೇಟ್ ಮಾಡಿ ಆಹಾರವನ್ನು ನಿಧಾನವಾಗಿ ಪ್ರಾರಂಭಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.ಎಂಜಲನ್ನು ಸಹ ನುಂಗಲು ಒದ್ದಾಡುತ್ತಿದ್ದ ಮಗು ಈಗ ಆರೋಗ್ಯವಾಗಿದ್ದು, ತಾನೇ  ಸ್ವತಃ ಆಹಾರ , ನೀರನ್ನು ಸೇವಿಸುತ್ತಿದ್ದಾನೆ. ಈ ರೀತಿಯ ಪ್ರಕರಣ ೫೦,೦೦೦ದಲ್ಲಿ ಒಬ್ಬರಿಗೆ ಬರುತ್ತದೆ. ಜೊತೆಗೆ ಮಗುವಿನ ಬ್ಲಡ್ ಗ್ರೂಪ್ ಎಬಿ ನೆಗೆಟಿವ್ ಆಗಿದ್ದು, ಇಂತಹ ಅಪರೂಪದ ಚಿಕಿತ್ಸೆಯನ್ನು ಮಧ್ಯಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮಾಡಲಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಮುರುಗೇಶ್ ಮಾತನಾಡಿ, ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆ ಗೆ ಪ್ರಭಾ ಮಲ್ಲಿಕಾರ್ಜುನ ಅವರೇ ಕಾರಣರು. ಅವರು ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಈ ಮಗುವನ್ನು ನೋಡಿ, ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಚಿಸಿದರು. ಶಸ್ತ್ರಚಿಕಿತ್ಸೆಯನ್ನು  ಸರ್ಕಾರದ ಯೋಜನೆಯಡಿ ಮಾಡಲಾಗಿದ್ದು, ಔಷಧಿಗಳ ವೆಚ್ಚವನ್ನು ಎಸ್.ಎಸ್. ಕೇರ್ ಟ್ರಸ್ಟ್  ಭರಿಸಿದೆ. ಇದೇ ಟ್ರಸ್ಟ್ ಅಡಿ ಸಾಕಷ್ಟು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವುದಾಗಿ ತಿಳಿಸಿದರಲ್ಲದೆ, ಯಶಸ್ವಿ ಶಸ್ತ್ರಚಿಕಿತ್ಸೆ ಗೆ ಕಾರಣರಾದ ನಮ್ಮ ವೈದ್ಯ ಹಾಗೂ ಸಿಬ್ಬಂದಿ ವರ್ಗ, ಪಿಜಿ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಹೇಳಿದರು. ಅರಿವಳಿಕೆ ವಿಭಾಗದ ಪ್ರಾಧ್ಯಾಪಕಿ ಬಿ.ಆರ್. ಉಮಾ ಮಾತನಾಡಿ, ಚಿಕಿತ್ಸೆ ವೇಳೆ ಮಗುವಿನ ದೇಹದ ತೂಕಕ್ಕೆ  ಸರಿಯಾಗಿ ಅನಸ್ತೇಶಿಯಾ ನೀಡಲಾಗುವುದು. ಮಗುವಿನ ಹೃದಯದಲ್ಲಿ ಸಣ್ಣ ರಂಧ್ರ ಇತ್ತು. ಎದೆ ಪಕ್ಕದಲ್ಲಿ ಆಪರೇಷನ್ ಮಾಡುವುದರಿಂದ ಸ್ವಲ್ಪ ಯಾಮಾರಿದರೂ ಹೃದಯ, ಜಠರಕ್ಕೆ ತೊಂದರೆಯಾಗುವ ಸಾಧ್ಯತೆ ಇತ್ತು. ಶಸ್ತ್ರ ಚಿಕಿತ್ಸೆ ನಂತರ ಮಗುವಿಗೆ ೪೮ ಗಂಟೆಗಳ ಕಾಲ ಕೃತಕ ಉಸಿರಾಟದ ಯಂತ್ರವನ್ನು ಅಳವಡಿಸಲಾಗಿತ್ತು ಎಂದು ವಿವರಿಸಿದರು.ಡಾ. ಕೌಶಿಕ್ ಮಾತನಾಡಿ, ಈ ಶಸ್ತ್ರ ಚಿಕಿತ್ಸೆಗೆ ನಮ್ಮ ಸಿಹೆಚ್ಐನಲ್ಲಿ ಸಾಕಷ್ಟು ತಯಾರಿ ನಡೆಸಿದ್ದೆವು. ಇದೇ ಶಸ್ತ್ರಚಿಕಿತ್ಸೆಗೆ ೧೦ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದರೆ ಇಲ್ಲಿ ೨ರಿಂದ೨-೫೦ಲಕ್ಷ ರೂಪಾಯಿಗಳಲ್ಲಿ ಮಾಡಲಾಗಿದೆ. ಆತನನ್ನು ೧೫ ದಿನ, ತಿಂಗಳಿಗೊಮ್ಮೆ ಪರೀಶೀಲನೆ ಮಾಡಬೇಕಾಗುತ್ತದೆ ಎಂದರು.ಹಿರಿಯ ಮಕ್ಕಳ ತಜ್ಞ ಡಾ. ಜಿ. ಗುರುಪ್ರಸಾದ್ ಮಾತನಾಡಿ, ಬಾಪೂಜಿ ಸಿಹೆಚ್ಐ ವಿಭಾಗವು ರಾಜ್ಯದಲ್ಲಿಯೇ ಎರಡನೇ ದೊಡ್ಡ ಮಕ್ಕಳ ಆಸ್ಪತ್ರೆ ಯಾಗಿದ್ದು, ಡಾ. ನಿರ್ಮಲಾ ಕೇಸರಿ ಮೇಡಂ ಅವರು ಆಶಯದಂತೆ ಸಂಶೋಧನಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಮ್ಯಾಗ್ಜಿನ್ ಗಳಲ್ಲಿ ಅನೇಕ ವೈದ್ಯಕೀಯ ವರದಿಗಳು ಪ್ರಕಟವಾಗಿವೆ. ಅಲ್ಲದೆ, ಇತರೆ ಮಕ್ಕಳ ಆಸ್ಪತ್ರೆಗಳ ಪುನಶ್ಚೇತನಕ್ಕೂ ಸಹಕಾರ ನೀಡುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ, ಡಾ. ಪ್ರಕಾಶ್, ಡಾ. ಕೌಜಲಗಿ, ಡಾ. ಮಧು ಪೂಜಾರ್, ಡಾ. ಅಕ್ಷತಾ, ಡಾ. ಹರಿತ, ಡಾ. ದೇವರಾಜ್ ಕೊಪ್ಪದ್ ಇನ್ನಿತರರಿದ್ದರು.