ಬಾದಾಮಿ ತಾಲೂಕು ದ್ವಿತೀಯ ಸ್ಥಾನ

ಬಾದಾಮಿ,ಮೇ12: ಕಳೆದ ಮಾರ್ಚ/ಎಪ್ರಿಲ್ ನಲ್ಲಿ ನಡೆದ 2023 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಫಲಿತಾಂಶದಲ್ಲಿ ಶೇ86.63 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ತಾಲೂಕಿನಲ್ಲಿ 2792 ಬಾಲಕರು ಮತ್ತು 2563 ಬಾಲಕೀಯರು ಸೇರಿದಂತೆ ಒಟ್ಟು 5355 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 2360 ಬಾಲಕರು ಮತ್ತು 2279 ಬಾಲಕೀಯರು ಸೇರಿದಂತೆ 4639 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ86.63 ರಷ್ಟು ಫಲಿತಾಂಶದ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ತಾಲೂಕಿನ ನೀರಬೂದಿಹಾಳ ಕೆ.ಪಿ.ಎಸ್.ಶಾಲೆಯ ಮದನ ಶಿವಾನಂದ ಗಡಾದ ಮತ್ತು ಕಗಲಗೊಂಬದ ಇಂದಿರಾ ಗಾಂಧಿ ವಸತಿ ಶಾಲೆಯ ಬೋರವ್ವ ಬ್ಯಾಕೋಡ ಇಬ್ಬರೂ ವಿದ್ಯಾರ್ಥಿಗಳು 625 ಕ್ಕೆ 617 ಅಂಕ ಪಡೆಯುವ ಮೂಲಕ ತಾಲೂಕಿನ ಪ್ರಥಮ ಸ್ಥಾನ ಪಡೆದಿದ್ದು, ಕಗಲಗೊಂಬ ಇಂದಿರಾಗಾಂಧಿ ವಸತಿ ಶಾಲೆಯ ಮಲ್ಲು ನಡಮನಿ 616 ಅಂಕ ಪಡೆದು ದ್ವಿತೀಯ ಸ್ಥಾನ, ಚಿಕ್ಕಮುಚ್ಚಳಗುಡ್ಡ ಆದರ್ಶ ವಿದ್ಯಾಲಯದ ಅರವಿಂದ ವಜ್ರದ 615 ಅಂಕ ಪಡೆದು ತೃತೀಯ ಸ್ಥಾನ, ಇಂದಿರಾ ಗಾಂಧಿ ವಸತಿ ಶಾಲೆಯ ಶ್ರೀಶೈಲ ಗಾಣಿಗೇರ 614 ಅಂಕ ಪಡೆದು ಚತುರ್ಥ ಸ್ಥಾನ ಮತ್ತು ಗುಳೇದಗುಡ್ಡದ ಮಡಿವಾಳಪ್ಪ ಹುಚ್ಚಪ್ಪ ಆಡಿನ ಪ್ರೌಢಶಾಲೆಯ ಅಮೋಘ ಜ್ಞಾನೇಶ್ವರ ಬೊಂಬ್ಲೆಕರ ಐದನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ, ನೋಡಲ್ ಅಧಿಕಾರಿ ಶಿಕ್ಷಣ ಸಂಯೋಜಕ ಹನಮಂತರಾಜು ಅಭಿನಂದಿಸಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ; ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ನೀರಬೂದಿಹಾಳ ಕೆ.ಪಿ.ಎಸ್.ಶಾಲೆಯ ವಿದ್ಯಾರ್ಥಿ ಮದನ ಗಡಾದ ಮತ್ತು ಕಗಲಗೊಂಬದ ಇಂದಿರಾ ಗಾಂಧಿ ವಸತಿ ಶಾಲೆಯ ಬೋರವ್ವ ಬ್ಯಾಕೋಡ ಇಬ್ಬರು ವಿದ್ಯಾರ್ಥಿಗಳನ್ನು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದರ ಮತ್ತು ಅಧಿಕಾರಿಗಳ ತಂಡ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ, ಕೆಪಿಎಸ್ ಶಾಲೆಯ ಉಪಪ್ರಾಚಾರ್ಯ ನಾಗರಾಜ ದೇಶಪಾಂಡೆ, ನೋಡಲ್ ಅಧಿಕಾರಿ, ಶಿಕ್ಷಣ ಸಂಯೋಜಕ ಹನಮಂತರಾಜು ಹಾಜರಿದ್ದರು.