ಬಾತ್‌ರೂಮ್‌ನಲ್ಲಿ ಚಿಲಕ ಹಾಕಿ ಆತಂಕ ಸೃಷ್ಟಿಸಿದ ಬಾಲಕನ ರಕ್ಷಣೆ!

ಉಡುಪಿ, ಜ.೩- ತಾಯಿ ಬೈದ ಕಾರಣಕ್ಕೆ ಸಿಟ್ಟಿಗೆದ್ದು ಫ್ಲ್ಯಾಟ್‌ನ ಬಾತ್ ರೂಮ್‌ನಲ್ಲಿ ಚಿಲಕ ಹಾಕಿಕೊಂಡಿದ್ದ ಬಾಲಕನನ್ನು ಉಡುಪಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮೂಲಕ ರಕ್ಷಿಸಿರುವ ಘಟನೆ ಶನಿವಾರ ನಡೆದಿದೆ.

ಮಣಿಪಾಲ ಪ್ರೆಸ್ ಸಮೀಪ ಇರುವ ಏಳು ಮಹಡಿಯ ವಸತಿ ಸಮುಚ್ಛಯದ ನಾಲ್ಕನೆ ಮಹಡಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ಒಟ್ಟು ಆರು ಮಂದಿ ಸಿಬ್ಬಂದಿ ಸುಮಾರು ಒಂದು ಗಂಟೆಗಳ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ದಿನಾಲೂ ಮೊಬೈಲ್ ನೋಡುವ ವಿಚಾರದಲ್ಲಿ ತನ್ನ ಮಗನಿಗೆ ತಾಯಿ ಜ.೧ರಂದು ರಾತ್ರಿ ಬೈದಿದ್ದರೆನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ೧೭ರ ಹರೆಯದ ಬಾಲಕ ಫ್ಲಾಟ್‌ನ ಬಾತ್‌ರೂಮ್‌ಗೆ ಹೋಗಿ ಚಿಲಕ ಹಾಕಿಕೊಂಡಿದ್ದಾನೆ. ಎಷ್ಟು ಬಾಗಿಲು ಬಡಿದರೂ ತೆಗೆಯದ ಬಾಲಕ ಗಂಟೆಗಳ ಕಾಲ ಯಾವುದೇ ಮಾತಿಲ್ಲದೆ ಕುಳಿತುಕೊಂಡಿದ್ದ ಎನ್ನಲಾಗಿದೆ. ಇದರಿಂದ ಭಯಭೀತರಾದ ಮನೆಯವರು ಕೂಡಲೇ ಉಡುಪಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸಿಬ್ಬಂದಿ, ಬಾಲಕನ ರಕ್ಷಣೆಗೆ ಕಾರ್ಯತಂತ್ರ ರೂಪಿಸಿದರು. ಬಾತ್‌ರೂಮ್ ಬಾಗಿಲು ಮುರಿಯುವಾಗ ಬಾಲಕ ಯಾವುದೇ ಅಡೆತಡೆ ಇಲ್ಲದ ಬಾತ್‌ರೂಮ್ ಕಿಟಕಿಯಿಂದ ಹೊರ ಹಾರುವ ಸಾಧ್ಯತೆ ಬಗ್ಗೆ ಅರಿತು ಕೊಂಡರು. ಅದಕ್ಕಾಗಿ ಕಟ್ಟಡದ ಏಳನೇ

ಮಹಡಿಯಿಂದ ಹಗ್ಗದ ಮೂಲಕ ಓರ್ವ ಸಿಬ್ಬಂದಿ ನಾಲ್ಕನೆ ಮಹಡಿಯ ಬಾತ್‌ರೂಮ್‌ನ ಕಿಟಕಿಗೆ ಇಳಿದು ಬಾಲಕ ಹೊರ ಹಾರದಂತೆ ತಡೆಯೊಡ್ಡಿದ್ದರು. ಅದೇ ವೇಳೆ ಒಳಗಿನಿಂದ ಬಾತ್‌ರೂಮ್ ಬಾಗಿಲನ್ನು ಮುರಿದು ಸಿಬ್ಬಂದಿಗಳು ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ ಎಂದು ಅಗ್ನಿಶಾಮಕದಳದ ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅಶ್ವಿನ್, ರವಿ ನಾಯಕ್, ಸುಧಾಕರ ದೇವಾಡಿಗ, ಹೋಮ್‌ಗಾರ್ಡ್ ಹಕೀಮ್, ಪ್ರಭಾಕರ, ಚಾಲಕ ಆಲ್ವಿನ್ ಪಾಲ್ಗೊಂಡಿದ್ದರು.