ಬಾಣಾವರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹ

ಅರಸೀಕೆರೆ, ಆ. ೧- ತಾಲ್ಲೂಕಿನ ಬಾಣಾವರ ವಾಣಿಜ್ಯ ಕೇಂದ್ರವಾಗಿದೆ. ಸುತ್ತಮುತ್ತಲ ಅನೇಕ ಪ್ರವಾಸಿ ತಾಣಗಳಿಗೆ ಸಂಪರ್ಕ ಕೇಂದ್ರವಾಗಿದೆ. ಆದ್ದರಿಂದ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅನುಮತಿ ನೀಡಬೇಕೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ರೈಲ್ವೆ ನಿಲ್ದಾಣ ಅಧಿಕಾರಿ ಸಂಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಬಾಣಾವರ ರೈಲು ನಿಲ್ದಾಣದ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ರಾಜ್ಯ ರೈತ ಸಂಘದ ಸಂಚಾಲಕ ಪ್ರಸನ್ನಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಬಾಣವರ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಸಂಪರ್ಕ ಹೊಂದಿದೆ. ಬಾಣವರ ಸಮೀಪ ಇರುವ ಜಾವಗಲ್ ದರ್ಗಾ ಪ್ರಸಿದ್ಧವಾಗಿದೆ. ಪ್ರತಿನಿತ್ಯ ದರ್ಗಾಕ್ಕೆ ಹೋಗಲು ರೈಲಿನ ಮೂಲಕ ಸಾವಿರಾರು ಮುಸಲ್ಮಾನರು ಬರುತ್ತಾರೆ. ಎಂದರು.
ವಿಶ್ವವಿಖ್ಯಾತ ಬೇಲೂರು, ಹಳೆಬೀಡು ದೇವಾಲಯಗಳಿಗೆ ಬರುವಂತಹ ಪ್ರವಾಸಿಗರು ಬಾಣವರ ಮುಖಾಂತರವೇ ಹೋಗಬೇಕಾಗಿರುವ ಕಾರಣ ಬಾಣಾವರದ ಮೂಲಕ ಹಾದು ಹೋಗಿರುವ ರೈಲ್ವೆ ನಿಲ್ದಾಣದಲ್ಲಿ ಸೂಪರ್ ಫಾಸ್ಟ್ ಹಾಗೂ ಇಂಟರ್ ಸಿಟಿ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಕೇಂದ್ರ ರೈಲ್ವೆ ಇಲಾಖೆ ಸಚಿವರಿಗೆ ಮನವಿ ಮಾಡಿದರು.
ರೈತ ಮುಖಂಡ ಬಿ.ಎನ್. ಬೀರಪ್ಪ ಮಾತನಾಡಿ, ಬಾಣಾವರ ಗ್ರಾಮವು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದು, ಈ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚು ರೈಲುಗಳ ನಿಲುಗಡೆ ಅವಶ್ಯಕವಾಗಿದೆ. ರೈಲ್ವೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರಾದ ಆಯುಬ್ ಭಾಷಾ. ಏಜಾಜ್ ಪಾಷಾ. ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು.