ಬಾಣಂತಿ ಸಾವು: ಸರ್ಕಾರಿ ವೈದ್ಯರ ವಿರುದ್ಧ ಪ್ರತಿಭಟನೆ

ಕುಣಿಗಲ್, ಜು. ೩೦- ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತ ಮಹಿಳೆಯರ ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿ ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.
ತಾಲೂಕಿನ ಕೊತ್ತಗೆರೆ ಹೋಬಳಿ ತೆರೆದಕುಪ್ಪೆ ಗ್ರಾಮದ ಮಹಿಳೆ ಪಲ್ಲವಿ (೨೧) ಎಂಬಾಕೆಯೇ ಮೃತಪಟ್ಟಿರುವ ಬಾಣಂತಿ.
ಜುಲೈ ೬ ರಂದು ಪಲ್ಲವಿಯನ್ನು ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರೊಬ್ಬರು ಹಣ ನೀಡಿದರೆ ಮಾತ್ರ ಹೆರಿಗೆ ಮಾಡುವುದು ಎಂದು ಆಕೆಯ ಪೋಷಕರಲ್ಲಿ ಹಣದ ಬೇಡಿಕೆ ಇಟ್ಟಿದ್ದರು. ಬಳಿಕ ಆಕೆಯ ಪತಿ ಹಣ ನೀಡಿದ ನಂತರ ಅಲ್ಲಿನ ವೈದ್ಯರು ಸಾಮಾನ್ಯ ಹೆರಿಗೆ ಮಾಡಲು ಸಾಧ್ಯವಿಲ್ಲ ಎಂದು ಸಿಸೇರಿಯನ್ ಹೆರಿಗೆ ಮಾಡಿದ್ದಾರೆ. ಈ ಸಂದರ್ಭ ಬಾಣಂತಿಗೆ ತೀವ್ರ ರಕ್ತ ಸ್ರಾವವಾಗಿ ತೀರ ಅಸ್ವಸ್ಥ ಸ್ಥಿತಿಗೆ ತಲುಪಿದ್ದರು. ಈ ವೇಳೆ ಅಲ್ಲಿನ ವೈದ್ಯರೇ ಬಾಣಂತಿಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಿ ಬಳಿಕ ಬೆಂಗಳೂರಿನ ಕೆಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಬಾಣಂತಿ ಮೃತಪಟ್ಟಿದ್ದು, ಇದಕ್ಕೆ ವೈದ್ಯರೇ ನೇರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಆಕ್ರೋಶಗೊಂಡ ಪಲ್ಲವಿಯ ಪೋಷಕರು ಆಸ್ಪತ್ರೆ ಒಳ ನುಗ್ಗಿ ದಾಂಧಲೆಗೆ ಯತ್ನಿಸಿದ್ದು, ಪೊಲೀಸರ ಮಧ್ಯ ಪ್ರವೇಶದಿಂದಾಗಿ ಅನಾಹುತ ತಪ್ಪಿದೆ.
ವೈದ್ಯರ ಸ್ಪಷ್ಟನೆ
ಸಿಜೇರಿಯನ್ ಮೂಲಕ ಹೆರಿಗೆ ಮಾಡಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಹರೀಶ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಪಲ್ಲವಿಗೆ ಇದೇ ತಿಂಗಳ ೭ ರಂದು ಆಪರೇಷನ್ ಮಾಡಲಾಗಿತ್ತು. ಅಂದು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದರು. ನಂತರ ಇದೇ ಮಹಿಳೆ ಬೇರೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ನನ್ನ ಚಿಕಿತ್ಸೆಯಲ್ಲಿ ಯಾವುದೇ ಲೋಪಗಳು ಆಗಿಲ್ಲ. ಈ ಬಗ್ಗೆ ಯಾವುದೇ ರೀತಿಯ ತನಿಖೆಗೆ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.